ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಖಂಡಿಸಿ ಗ್ರಾಮ ಸೇವಾ ಸಂಘದಿಂದ ಉಪವಾಸ ಸತ್ಯಾಗ್ರಹ

Update: 2020-10-03 17:06 GMT

ಬೆಂಗಳೂರು, ಅ.3: ಉತ್ತರ ಪ್ರದೇಶದ ಹಾಥರಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಸಾವು ಪ್ರಕರಣವನ್ನು ಖಂಡಿಸಿ ಹಿರಿಯ ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಗ್ರಾಮ ಸೇವಾ ಸಂಘದ ಸದಸ್ಯೆಯರು ನಗರದ ಗಾಂಧಿಭವನದ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಉಪವಾಸ ಸತ್ಯಾಗ್ರಹಿಗಳು, ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ ದಲಿತ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇದೆ. ಈ ಬಗ್ಗೆ ಸರಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ನೋಡಿದರೆ ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇದೆಯೇ ಎಂಬ ಬಗ್ಗೆ ಆತಂಕ ಕಾಡತೊಡಗಿದೆ ಎಂದು ತಿಳಿಸಿದ್ದಾರೆ.

ಕೆಳವರ್ಗದ ಹೆಣ್ಣು ಮಕ್ಕಳಾದ ನಾವು ಧೈರ್ಯದಿಂದ ನಡೆದಾಡಲು, ಉದ್ಯೋಗ ನಡೆಸಲು ಹಾಗೂ ಮಾನ ಕಾಪಾಡಿಕೊಳ್ಳುವ ಹಕ್ಕನ್ನು ಕಳೆದುಕೊಂಡಿದ್ದೇವೆಯೇ ಎಂಬ ಅನುಮಾನ ನಮ್ಮನ್ನು ಕಾಡತೊಡಗಿದೆ. ದೇಶಾದ್ಯಂತ ದಲಿತ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಹಿಂಸೆ ಪ್ರಕರಣಗಳು ನಮಗೆ ದಿಕ್ಕು ತೋಚದಂತೆ ಮಾಡಿದೆ ಎಂದು ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಗಾಂಧಿ ಭವನದ ಮುಂಭಾಗದ ರಸ್ತೆಯಲ್ಲಿ ಗ್ರಾಮೋದ್ಯೋಗ ಪದಾರ್ಥಗಳ ವ್ಯಾಪಾರ ಮಾಡಿ ಚರಕ ಕೈಮಗ್ಗ ಸಹಕಾರ ಸಂಘವನ್ನು ಗಟ್ಟಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದರ ಜೊತೆಗೆ ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯಗಳನ್ನು ಖಂಡಿಸಿ ನಾಳೆ(ಅ.4)ಯೂ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಗ್ರಾಮ ಸೇವಾ ಸಂಘ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News