ಹಳೇ ನೋಟು ಬದಲಾವಣೆ ದಂಧೆ ಆರೋಪ: ಇಬ್ಬರ ಬಂಧನ
Update: 2020-10-04 20:31 IST
ಬೆಂಗಳೂರು, ಅ. 4: ಕೇಂದ್ರ ಸರಕಾರ ನಿಷೇಧಿಸಿರುವ ಗರಿಷ್ಠ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡುವ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಇಬ್ಬರನ್ನು ಇಲ್ಲಿನ ಆರ್ ಟಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಾಗವಾರದ ಶೇಕ್ ಹುಸೇನ್(25), ಸುಲ್ತಾನ್ ಪಾಳ್ಯದ ಮುದಾಪೀರ್ ನಝೀರ್ (32) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಸುಲ್ತಾನ್ ಪಾಳ್ಯದ ಭುವನೇಶ್ವರಿ ನಗರದ ಆರೋಪಿ ಮುದಾಪೀರ್ ಮನೆಯಲ್ಲಿ ನಿಷೇಧಿತ ನೋಟುಗಳಿರುವ ಮಾಹಿತಿಯಾಧರಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದಾಳಿ ವೇಳೆ ಆರೋಪಿ ಮನೆಯಲ್ಲಿದ್ದ ಚೀಲದಲ್ಲಿ 80 ಲಕ್ಷ ರೂ. ಮೌಲ್ಯದ 1 ಸಾವಿರ ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.
ಆರೋಪಿ ನೀಡಿದ ಮಾಹಿತಿಯಾಧರಿಸಿ ಮತೊಬ್ಬ ಆರೋಪಿ ಶೇಕ್ ಹುಸೇನ್ ಮನೆಯಲ್ಲಿ ದಾಳಿ ನಡೆಸಿ ಆತನನ್ನು ಬಂಧಿಸಿ 20 ಲಕ್ಷ ರೂ. ಮೌಲ್ಯದ ನಿಷೇಧಿತ 1 ಸಾವಿರ ಮುಖಬೆಲೆಯ ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.