ಮಾದಕ ವಸ್ತು ಮಾರಾಟ: ಮೂವರು ವಿದೇಶಿ ಪ್ರಜೆಗಳ ಬಂಧನ
Update: 2020-10-04 21:35 IST
ಬೆಂಗಳೂರು, ಅ.4: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರು ವಿದೇಶಿ ಪ್ರಜೆಗಳನ್ನು ನಗರದ ಬೈಯಪನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ದೇಶದ ಅಕ್ರೈಕ್ ಅಂಥೋನಿ, ಎಜೋಫೋಮ, ಒಗ್ ಚುಕುವ ಫ್ರಾನ್ಸಿಸ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸದಾನಂದ ನಗರದ ಪಾರ್ಕ್ ಬಳಿ ಸಾರ್ವಜನಿಕವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತರಿಂದ ಸುಮಾರು 123 ಗ್ರಾಂ ಕೊಕೇನ್, 15 ಟ್ಯಾಬ್ಲೆಟ್ಸ್, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳು, ಮೊಬೈಲ್ ಗಳು ಸೇರಿದಂತೆ ಒಟ್ಟು 10 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವರ ವಿರುದ್ಧ ಎನ್ ಡಿಪಿಎಸ್ ಅಕ್ಟ್ 21ಸಿ ಹಾಗೂ ವಿದೇಶಿ ನೋಂದಣಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.