ಬೆಂಗಳೂರು: ಹತ್ರಸ್‍ನಲ್ಲಿ ದಲಿತ ಯುವತಿಯ ಅತ್ಯಾಚಾರ, ಕೊಲೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2020-10-05 17:12 GMT

ಬೆಂಗಳೂರು, ಅ.5: ಉತ್ತರ ಪ್ರದೇಶದ ಹತ್ರಸ್ ನಲ್ಲಿ ದಲಿತ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಕೇಂದ್ರ ಸರಕಾರ ಹಾಗೂ ಉತ್ತರ ಪ್ರದೇಶದ ಸರಕಾರಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು, ಆದಿತ್ಯನಾಥ್ ಸರಕಾರ ವಜಾಗೊಳಿಸುವಂತೆ ಆಗ್ರಹಿಸಿದರು.

ಸೋಮವಾರ ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಮಹಾತ್ಮ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ನಾಯಕರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಹರಿಪ್ರಸಾದ್, ಬಿಜೆಪಿ ನಾಯಕರು, ಮಾತಿಗೆ ಮುಂಚೆ ಗುಜರಾತ್, ಉತ್ತರ ಪ್ರದೇಶದ ಮಾಡೆಲ್ ಎನ್ನುತ್ತಾರೆ. ಆದರೆ, ನಾನು ಆಯಾ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಅವರು ನಮಗಿಂತ ಒಂದು ಶತಮಾನ ಹಿಂದುಳಿದಿದ್ದಾರೆ ಎಂದು ತಿಳಿಸಿದರು.

ನಮ್ಮ ನಾಡು ಸ್ವರ್ಗದಂತೆ ಇದೆ. ಹೀಗಿದ್ದರೂ, ಕರ್ನಾಟಕದಲ್ಲಿಯೇ ಹುಟ್ಟಿಲ್ಲ ಎನ್ನುವ ರೀತಿಯಲ್ಲಿ ಬಿಜೆಪಿ ನಾಯಕರು ಹೇಳುತ್ತಾರೆ ಎಂದ ಅವರು, ಉತ್ತರ ಪ್ರದೇಶವನ್ನು ಮೇಲ್ನೋಟಕ್ಕೆ ರಾಮ ರಾಜ್ಯ ಎಂದು ಬಿಂಬಿಸಲಾಗುತ್ತಿದೆ. ಆದರೆ, ಅಲ್ಲಿ ರಾವಣ ರಾಜ್ಯವೇ ನಿರ್ಮಾಣ ಆಗುತ್ತಿದೆ. ಪೊಲೀಸ್ ಮತ್ತು ಮೇಲ್ಜಾತಿಯ ದಬ್ಬಾಳಿಕೆ ಮೀತಿ ಮೀರಿದೆ ಎಂದು ಆರೋಪಿಸಿದರು.

ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಮಹಿಳೆಯರಿಗೆ ರಕ್ಷಣೆ ಇಲ್ಲ. ಮಹಿಳೆಯರ ರಕ್ಷಣೆಗೆ ಅನೇಕ ಕಾನೂನು ಇದ್ದರೂ ದೌರ್ಜನ್ಯ ತಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಇಂತಹ ಘಟನೆಗಳು ನಡೆದ ಕೂಡಲೇ ಆರೋಪಿಗಳನ್ನು ಬಂಧಿಸಿ, ಸಾರ್ವಜನಿಕವಾಗಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಸನ್ಯಾಸಿ ರಾಜ್ಯ ಎಂದರೆ ಸುಖಕರ ಎನ್ನುವ ಮಾತಿದೆ. ಆದರೆ, ಉತ್ತರ ಪ್ರದೇಶದಲ್ಲಿ ಕ್ರೌರ್ಯ ಹೆಚ್ಚಾಗಿದ್ದು, ಸಂವಿಧಾನದ ಆಶಯಗಳನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಈ ದೇಶಕ್ಕೆ ಸಂಸ್ಕೃತಿ ಮೂಲವನ್ನು ಮಹರ್ಷಿ ವಾಲ್ಮೀಕಿ ಅವರು ಕೊಟ್ಟರು. ಆದರೆ, ಅವರದೇ ಆದ ಸಮುದಾಯದ ಯುವತಿ ಮೇಲೆ ಅತ್ಯಾಚಾರ ಆಗಿದೆ. ರಾಮರಾಜ್ಯ ಎನ್ನುವ ಬಿಜೆಪಿಗರಿಗೆ ನಾಚಿಕೆಗೇಡಿನ ಸಂಗತಿ ಎಂದರು.

ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕರಾದ ಕೆ.ಜೆ.ಜಾರ್ಜ್, ಭೈರತಿ ಸುರೇಶ್, ರಿಝ್ವಾನ್ ಅರ್ಶದ್, ಸೌಮ್ಯ ರೆಡ್ಡಿ ಸೇರಿದಂತೆ ಕಾಂಗ್ರೆಸ್ ವಿವಿಧ ವಿಭಾಗ ಮುಖ್ಯಸ್ಥರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News