ಅಕ್ಟೋಬರ್ ನಲ್ಲಿ ಉತ್ತಮ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಬೆಂಗಳೂರು, ಅ.5: ನಗರದಲ್ಲಿ ಈ ತಿಂಗಳಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ವಾಡಿಕೆಯಂತೆ ಸರಾಸರಿ 168 ಮಿ.ಮೀ ನಷ್ಟು ಮಳೆ ದಾಖಲಾಗುತ್ತದೆ. ಕಳೆದ ಸೆಪ್ಟೆಂಬರ್ ನಲ್ಲಿ ಹೆಚ್ಚು ಮಳೆಯಾಗಿರುವ ಕಾರಣ ಅದು ಅಕ್ಟೋಬರ್ ನಲ್ಲೂ ವಿಸ್ತರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 300 ಮಿ.ಮೀ ನಷ್ಟು ಮಳೆಯಾಗಿತ್ತು. ತಿಂಗಳು ಪೂರ್ತಿ ನಗರದ ನಾನಾ ಭಾಗಗಳಲ್ಲಿ ಒಂದಲ್ಲಾ ಒಂದು ದಿನ ವರ್ಷಧಾರೆಯಾಗುತ್ತಿತ್ತು. ದಂಡು ಪ್ರದೇಶದ ಕುಶಾಲನಗರದಲ್ಲಿ ಒಂದೇ ದಿನ(ಸೆ.9) 136 ಮಿ.ಮೀ ಮಳೆ ಬಿದ್ದಿದ್ದು, ಆ ತಿಂಗಳ ಮಟ್ಟಿಗೆ ದಾಖಲೆಯಾಗಿತ್ತು. ಅಲ್ಲದೇ ಹತ್ತಕ್ಕೂ ಹೆಚ್ಚು ಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ಮಿ.ಮೀ ನಷ್ಟು ಮಳೆಯಾಗಿ ತಗ್ಗು ಪ್ರದೇಶಗಳಲ್ಲಿ ಸಮಸ್ಯೆ ತಂದೊಡ್ಡಿತ್ತು. ಅಕ್ಟೋಬರ್ ನಲ್ಲಿ ಅಂತಹ ಅನಾಹುತ ಆಗದಷ್ಟು ಮಳೆ ಸುರಿಯದಿದ್ದರೂ, ದಸರಾ ಮುನ್ನ ಸಾಕಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದಲ್ಲಿ ಕಳೆದ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ವರೆಗಿನ ಮುಂಗಾರು ಅವಧಿಯಲ್ಲಿ ಒಟ್ಟು 600 ಮಿ.ಮೀ ನಷ್ಟ ಮಳೆಯಾಗಿದೆ.