ಕೊರೋನ ವೈರಸ್ ಸೋಂಕು: ಆಸ್ಪತ್ರೆಗೆ ದಾಖಲಾದವರಲ್ಲಿ ಯುವಕರೇ ಅಧಿಕ

Update: 2020-10-06 04:21 GMT

ಹೊಸದಿಲ್ಲಿ : ಕೊರೋನ ವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಪ್ರತಿ 10 ಮಂದಿಯ ಪೈಕಿ ಆರು ಮಂದಿ (ಶೇಕಡ 62.5) 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎನ್ನುವುದು ಕೇಂದ್ರ ಆರೋಗ್ಯ ಸಚಿವಾಲಯದ ಸಮಗ್ರ ಸರ್ವೇಕ್ಷಣೆಯಿಂದ ತಿಳಿದುಬಂದಿದೆ.

ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಎರಡು ಲಕ್ಷ ಪ್ರಕರಣಗಳನ್ನು ವಿಶ್ಲೇಷಣೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ.
ಸೋಂಕಿನಿಂದ ಮೃತಪಟ್ಟವರಲ್ಲಿ ಬಹಳಷ್ಟು ಮಂದಿ ಹಿರಿಯ ನಾಗರಿಕರಾಗಿದ್ದರೂ, ಆಸ್ಪತ್ರೆಗೆ ದಾಖಲಾದವರ ಪೈಕಿ ಯುವಕರೇ ಅಧಿಕ. ಅಂತರರಾಷ್ಟ್ರೀಯ ಮಟ್ಟದಲ್ಲೂ ಇದೇ ಪ್ರವೃತ್ತಿ ಕಂಡುಬಂದಿದೆ.

ಕಳೆದ ವಾರ ಸಂಭವಿಸಿದ ಒಂದು ಲಕ್ಷ ಸಾವಿನ ಪ್ರಕರಣಗಳನ್ನು ವಿಶ್ಲೇಷಿಸಿದಾಗ ಈ ಪೈಕಿ ಶೇಕಡ 53ರಷ್ಟು ಮಂದಿ 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಹಾಗೂ ಶೇಕಡ 88ರಷ್ಟು ಮಂದಿ 45ಕ್ಕಿಂತ ಹೆಚ್ಚು ವಯಸ್ಸಿನವರು ಎನ್ನುವುದು ತಿಳಿದುಬಂದಿದೆ. ಸೋಮವಾರ ರಾತ್ರಿ ವೇಳೆಗೆ ದೇಶದಲ್ಲಿ ಕೊರೋನ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 1,03,622ಕ್ಕೇರಿದೆ.

ಭಾರತದಲ್ಲಿ ಸಾಂಕ್ರಾಮಿಕ ಹರಡಿದ ಬಳಿಕ ಇದೇ ಮೊದಲ ಬಾರಿಗೆ ಆಸ್ಪತ್ರೆಗೆ ದಾಖಲಾದ ಸೋಂಕಿತರ ವಯಸ್ಸಿನ ಅಂಕಿ ಅಂಶ ಬಿಡುಗಡೆ ಮಾಡಲಾಗಿದೆ.

ಆಸ್ಪತ್ರೆಗೆ ದಾಖಲಾದವರ ಪೈಕಿ ಶೇಕಡ 9ರಷ್ಟು ಮಂದಿ ಮಾತ್ರ 60 ವರ್ಷ ಮೇಲ್ಪಟ್ಟವರು ಎನ್ನುವುದು ಅಂಕಿ ಅಂಶದಿಂದ ತಿಳಿದುಬಂದಿದೆ. ಶೇಕಡ 25.84 ಮಂದಿ 21-30 ವರ್ಷ ವಯಸ್ಸಿನವರು ಹಾಗೂ 22.48ರಷ್ಟು ಮಂದಿ 31ರಿಂದ 40 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದೆ.

ಭಾರತದಲ್ಲಿ ಕಂಡುಬಂದಿರುವ ಈ ಪ್ರವೃತ್ತಿ ಜಾಗತಿಕ ಪ್ರವೃತ್ತಿಗೆ ಅನುರೂಪವಾಗಿದ್ದು, ಅಧಿಕ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿರುವುದು ಯುವಕರಾದರೂ, ಬಲಿಯಾಗುವವರಲ್ಲಿ ವೃದ್ಧರೇ ಅಧಿಕ ಎಂದು ತಜ್ಞರು ಹೇಳುತ್ತಾರೆ. ಮೃತಪಟ್ಟವರಲ್ಲಿ ಶೇಕಡ 70ಕ್ಕಿಂತಲೂ ಅಧಿಕ ಮಂದಿ ಹೈಪರ್ ಟೆನ್ಷನ್, ಮಧುಮೇಹ, ಹೃದ್ರೋಗ, ಲಿವರ್ ಮತ್ತು ಕಿಡ್ನಿ ಸಮಸ್ಯೆ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News