ಸಿಎಂ ಕುಟುಂಬದ ಭ್ರಷ್ಟಾಚಾರ ಮರೆಮಾಚಲು ಸಿಬಿಐ ದಾಳಿ: ಪ್ರಿಯಾಂಕ್ ಖರ್ಗೆ ಆರೋಪ

Update: 2020-10-06 13:14 GMT

ಬೆಂಗಳೂರು, ಅ.6: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಮೇಲೆ ಬಂದಿರುವ ಭ್ರಷ್ಟಾಚಾರದ ಆರೋಪವನ್ನು ಮರೆಮಾಚುವ ಉದ್ದೇಶದಿಂದ ಇಂತಹ ದಾಳಿ ನಡೆಸಲಾಗಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಮಂಗಳವಾರ ಸದಾಶಿವನಗರದ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.5ರಂದು ಡಿಕೆಶಿ ಅವರ ನಿವಾಸ, ಕಚೇರಿಗಳ ಮೇಲೆ ನಡೆದ ಸಿಬಿಐ ದಾಳಿ ರಾಜಕೀಯ ದುರುದ್ದೇಶದಿಂದ ಕೂಡಿದೆ. ಚುನಾವಣೆ ಹತ್ತಿರ ಬಂದಾಗ ಇದು ನಡೆಯುತ್ತಲೇ ಇದೆ. ಈ ರೀತಿಯ ಹೊಸ ಪ್ರವೃತ್ತಿಯೊಂದು ಪ್ರಾರಂಭವಾಗಿದೆ ಎಂದು ಕಿಡಿಕಾರಿದರು.

ವಿರೋಧ ಪಕ್ಷಗಳು ಎಲ್ಲಿ ಭ್ರಷ್ಟಾಚಾರ ಸೇರಿದಂತೆ ಇನ್ನಿತರ ಪ್ರಶ್ನೆ ಕೇಳುತ್ತವೋ ಅಲ್ಲಿ ಈ ರೀತಿ ದಾಳಿ ನಡೆಯುತ್ತವೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಪ್ರಶ್ನೆ ಕೇಳೋದು ತುಂಬಾ ಹೆಚ್ಚಾಗಿದೆ. ಅವರು ಸರಕಾರದ ವಿರುದ್ಧ ಹೋರಾಟ ರೂಪಿಸುತ್ತಿದ್ದಾರೆ. ಅದೇ ಕಾರಣಕ್ಕೆ ಈ ದಾಳಿ ನಡೆದಿದೆ ಎಂದು ಹೇಳಿದರು.

ರಾಜ್ಯದಲ್ಲಿ ಏಳೂವರೆ ಕೋಟಿ ಆರ್‍ಟಿಜಿಎಸ್(ರಿಯಲ್ ಟೈಮ್ ಗ್ರಾಸ್ ಸೆಟಲ್‍ಮೆಂಟ್ ಸಿಸ್ಟಮ್) ಆಗಿದೆ. ಇದರ ಬಗ್ಗೆ ಸಿಬಿಐ, ಐಟಿ ಏಕೆ ಕೇಸ್ ದಾಖಲಿಸಿಲ್ಲ. ಸುಮೋಟೋ ಕೇಸ್ ದಾಖಲಿಸಿಕೊಂಡು ತನಿಖೆ ಏಕೆ ಮಾಡುತ್ತಿಲ್ಲ. ಸಿಎಂ ಕುಟುಂಬದ ಭ್ರಷ್ಟಾಚಾರವನ್ನು ತನಿಖೆ ಮಾಡಲಿ. ಅದನ್ನು ಏಕೆ ಮಾಡುತ್ತಿಲ್ಲ. ಇದನ್ನೇ ಮುಂದಿಟ್ಟುಕೊಂಡು ನಾವು ಜನರ ಬಳಿ ಹೋಗುತ್ತೇವೆ. ಜನತಾ ನ್ಯಾಯಾಲಯದ ಮುಂದೆ ಹೋಗಿ ಅ.5ರ ಸಿಬಿಐ ದಾಳಿಯ ಬಗ್ಗೆ ಹೇಳುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News