ಲಂಚ ಸ್ವೀಕಾರ ಆರೋಪ: ವಿಶೇಷ ತಹಶೀಲ್ದಾರ್ ಸೇರಿ ಇಬ್ಬರು ಎಸಿಬಿ ಬಲೆಗೆ

Update: 2020-10-06 15:31 GMT

ಬೆಂಗಳೂರು, ಅ.6: ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ವಿಶೇಷ ತಹಶೀಲ್ದಾರ್ ಸೇರಿ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರಿನ ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್ ಲಕ್ಷ್ಮೀ, ಹಾಗೂ ಶಿರಸ್ತೇದಾರ್ ಆರ್.ಆರ್.ಪ್ರಸನ್ನಕುಮಾರ್ ಎಂಬವರ ವಿರುದ್ಧ ಎಸಿಬಿ ಪ್ರಕರಣ ದಾಖಲು ಮಾಡಿದೆ.

ಏನಿದು ಪ್ರಕರಣ?: ಬೇಗೂರು ಗ್ರಾಮದ ನಿವಾಸಿಯೊಬ್ಬರು 2 ಎಕರೆ ಜಮೀನು ಖರೀದಿಸಿದ್ದು, ಈ ಸಂಬಂಧ ಭೂಮಿಯ ಕೆಲ ದಾಖಲಾತಿಗಳು ಸರಿ ಇಲ್ಲದ ಕಾರಣ ದಕ್ಷಿಣ ಉಪವಿಭಾಗದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ತದನಂತರ, ನ್ಯಾಯಾಲಯವು ಸೆ.14ರಂದು ನೀಡಿದ  ತೀರ್ಪಿನಲ್ಲಿ ದೂರುದಾರರಿಗೆ ಜಮೀನಿನ ಖಾತೆಯನ್ನು ಮಾಡಿಕೊಡುವಂತೆ ಆದೇಶಿಸಿತ್ತು. ಇನ್ನೂ, ದೂರುದಾರ ಖರೀದಿಸಿದ ಜಮೀನಿನ ಮಾಲಕರು ಮೃತಪಟ್ಟಿರುವುದರಿಂದ ಇವರ ಮಕ್ಕಳ ಹೆಸರಿಗೆ ಖಾತೆ ವರ್ಗಾವಣೆ ಆಗಬೇಕಿತ್ತು.

ಈ ಸಂಬಂಧ ದೂರುದಾರ ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್ ಅವರಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಖಾತೆ ವರ್ಗಾವಣೆಗೆ ವಿಶೇಷ ತಹಶೀಲ್ದಾರ್ ಲಕ್ಷ್ಮೀ 5 ಲಕ್ಷಕ್ಕೆ ಬೇಡಿಕೆಯಿಟ್ಟರೆ, ಶಿರಸ್ತೇದಾರ್ 2 ಲಕ್ಷ ರೂ.ಗಳಿಗೆ ನೀಡುವಂತೆ ಒತ್ತಡ ಹೇರಿದ್ದ ಎನ್ನಲಾಗಿದೆ.

ಈ ಸಂಬಂಧ ದೂರು ದಾಖಲಿಸಿಕೊಂಡ ಎಸಿಬಿ ತನಿಖಾಧಿಕಾರಿಗಳು, ಮಂಗಳವಾರ ಆರೋಪಿಗಳು ದೂರುದಾರನಿಂದ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ಪ್ರಕರಣ ಬೇಧಿಸಿದ್ದಾರೆ.

ಜತೆಗೆ ಆರೋಪಿಗಳಿಗೆ ಸಹಕರಿಸಿದ್ದ ಉಷಾ ಎಂಬಾಕೆಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News