ಟ್ರಂಪ್ ಆಡಳಿತದ ಕೋವಿಡ್ ನಿರ್ವಹಣೆ ಐತಿಹಾಸಿಕ ವೈಫಲ್ಯ: ಕಮಲಾ ಹ್ಯಾರಿಸ್

Update: 2020-10-08 04:35 GMT

ಸಾಲ್ಟ್ ಲೇಕ್ ಸಿಟಿ: ಅಮೆರಿಕದಲ್ಲಿ ಕೋವಿಡ್-19 ಸಾಂಕ್ರಾಮಿಕವನ್ನು ಟ್ರಂಪ್ ಆಡಳಿತ ನಿಭಾಯಿಸಿದ ವಿಧಾನ ಐತಿಹಾಸಿಕ ವೈಫಲ್ಯ ಎಂದು ಅಮೆರಿಕ ಸೆನೆಟ್ ಸದಸ್ಯೆ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ವಾಗ್ದಾಳಿ ನಡೆಸಿದ್ದಾರೆ.

ಉಪಾಧ್ಯಕ್ಷ ಮೈಕ್ ಪೆನ್ಸ್ ಜತೆ ನೇರ ಮುಖಾಮುಖಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಮೆರಿಕದ ಯಾವುದೇ ಅಧ್ಯಕ್ಷರ ಅವಧಿಯಲ್ಲಿ ಸಂಭವಿಸಿರುವ ಅತಿದೊಡ್ಡ ವೈಫಲ್ಯ ಇದಾಗಿದೆ ಎಂದು ಬಣ್ಣಿಸಿದರು.

ಆದರೆ ಹ್ಯಾರಿಸ್ ವಿರುದ್ಧ ಪ್ರತಿದಾಳಿ ನಡೆಸಿದ ಮೈಕ್ ಪೆನ್ಸ್, ಡೊನಾಲ್ಡ್ ಟ್ರಂಪ್ ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಭರದಲ್ಲಿ ಹ್ಯಾರಿಸ್, ಕೊರೋನ ವೈರಸ್ ಲಸಿಕೆ ಕುರಿತ ಸಾರ್ವಜನಿಕ ವಿಶ್ವಾಸವನ್ನು ಕುಂದಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದರು.

"ನಮ್ಮ ದೇಶದ ಇತಿಹಾಸದಲ್ಲಿ ಯಾವುದೇ ಅಧ್ಯಕ್ಷರ ಆಡಳಿತಾವಧಿಯಲ್ಲಿ ಕಾಣದಷ್ಟು ಘನ ಘೋರ ವೈಫಲ್ಯವನ್ನು ಜನತೆ ಟ್ರಂಪ್ ಆಡಳಿತದಲ್ಲಿ ಕಂಡಿದ್ದಾರೆ" ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಜತೆ ಸ್ಪರ್ಧಿಸಿರುವ ಹ್ಯಾರಿಸ್ ವಿವರಿಸಿದರು.

"ವೈದ್ಯ ಡಾ. ಫೌಸಿಯವರು ಕೊರೋನ ವೈರಸ್ ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದರೆ, ಖಂಡಿತವಾಗಿಯೂ ನಾನು ಮೊದಲನೆ ಯವಳಾಗಿ ತೆಗೆದುಕೊಳ್ಳುತ್ತೇನೆ. ಆದರೆ ಟ್ರಂಪ್ ಹೇಳಿದರೆ ನಾನು ತೆಗೆದುಕೊಳ್ಳುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಅಮೆರಿಕದಲ್ಲಿ 75 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 2.10 ಲಕ್ಷ ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News