ರಾಷ್ಟ್ರೀಯ ಶಿಕ್ಷಣ ನೀತಿ: ಬಾಧಿಸುತ್ತಿರುವ ನೆಹರೂ ಚಿಂತನಾ ಕತೆಗಳು

Update: 2020-10-11 19:30 GMT

ಮುಂದಿನ ದಿನಗಳಲ್ಲಿ ಒಂದೆಡೆ ನೆಹರೂ ಪರಿಕಲ್ಪನೆಯ ಭಾರತ ಮತ್ತದರ ಜ್ಞಾನ ಪರಂಪರೆ, ಇನ್ನೊಂದೆಡೆ ಸನಾತನ ಭಾರತ ಮತ್ತು ಜಾಗತಿಕ ಜ್ಞಾನಗಳ ನಡುವಿನ ಹೊಸ ಶಿಕ್ಷಣ ನೀತಿ, ಇವುಗಳ ನಡುವಿನ ಪ್ರತಿರೋಧ ವಾಸ್ತವವಾಗುತ್ತದೆ. ಅದೇನಿದ್ದರೂ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಪ್ರತೀ ಹಂತದಲ್ಲೂ ನೆಹರೂ ಬಾಧಿಸುತ್ತ ಹೋಗುತ್ತಾರೆ. ಯಾವುದು ಹಳೆಯದು? ಯಾವುದು ಹೊಸತು? ಯಾರ ಮತ್ತು ಯಾವ ಭಾರತ? ಎಂಬ ಗೊಂದಲಗಳ ನಡುವೆ ನೆಹರೂರವರ ಚಿಂತನಾ ಕತೆಗಳು ಬಾಧಿಸುವುದು ಸಹಜವಾಗುತ್ತದೆ.


ರಾಷ್ಟ್ರೀಯ ಶಿಕ್ಷಣ ನೀತಿಯೆಂದು ಕರೆಯಲ್ಪಡುವ ನೂತನ ಶಿಕ್ಷಣ ನೀತಿ ಹತ್ತು ಹಲವು ಕಥನಗಳಿಗೆ, ಚರ್ಚೆಗಳಿಗೆ ಅನುವು ಮಾಡಿಕೊಟ್ಟಿರುವುದು ನಿಜ. ನೂತನ ಶಿಕ್ಷಣ ನೀತಿಯನ್ನು ಪ್ರತಿಪಾದಿಸುವ ವರ್ಗ ಈ ಚರ್ಚೆಯಲ್ಲಿ ಒಂದು ನಿರ್ದಿಷ್ಟ ವಾದವನ್ನು ಮುಂದಿಡುತ್ತದೆ. 1835ರಲ್ಲಿ ಬ್ರಿಟಿಷ್ ಇತಿಹಾಸಕಾರ ಮತ್ತು ರಾಜಕಾರಣಿ ಮೆಕಾಲೆಯ ಪ್ರಯತ್ನದಿಂದ ವಸಾಹತುಶಾಹಿ ಅಳವಡಿಸಿದ ‘ದಿ ಇಂಗ್ಲಿಷ್ ಎಜುಕೇಶನ್ ಆ್ಯಕ್ಟ್’ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಅರ್ಧದಷ್ಟು ಹಾಳುಗೆಡವಿದರೆ, ನೆಹರೂವಾದ ಇದನ್ನು ಪೂರ್ತಿಯಾಗಿ ಹಾಳುಗೆಡವಿತು. ಮೆಕಾಲೆವಾದದಿಂದಾಗಿ ಇಂಗ್ಲಿಷ್ ಭಾರತದ ಆಡಳಿತ ಭಾಷೆಯಾಗಿ ರೂಪುಗೊಂಡಿತ್ತು. ದೇಶೀಯ ಭಾಷೆಗಳಾದ ಪರ್ಶಿಯನ್ ಮತ್ತು ಸಂಸ್ಕೃತ ಭಾಷೆಗಳು ಮತ್ತು ಅದರೊಂದಿಗೆ ಬೆಸೆದುಕೊಂಡಿದ್ದ ದೇಶೀಯ ಜ್ಞಾನ ಮತ್ತು ಪರಂಪರೆ ಈ ಕಾರಣಗಳಿಂದಾಗಿ ಅಮಾನ್ಯಗೊಂಡವು, ತಮ್ಮ ಅಸ್ಮಿತೆಯನ್ನು ಕಳೆದುಕೊಂಡವು. ಮೆಕಾಲೆಗೆ ಇಂಗ್ಲಿಷ್ ಒಂದು ಜ್ಞಾನದ, ಹೊಸ ನಾಗರಿಕತೆಯ ಮತ್ತು ಶ್ರೇಷ್ಠತೆಯ ರೂಪಕ. ಅಲ್ಲದೆ ಅವನಿಗೆ ಇಂಗ್ಲಿಷ್ ಮಾಧ್ಯಮ ಇನ್ನೊಂದು ಕಾರಣಕ್ಕೆ ಬೇಕಿತ್ತು, ಅವನೇ ಹೇಳಿದಂತೆ, ‘‘ಈ ಹೊಸ ವರ್ಗ ರಕ್ತ ಮತ್ತು ಬಣ್ಣದಲ್ಲಿ ಭಾರತೀಯಾಗಿರಬೇಕು, ಆದರೆ ಬೌದ್ಧಿಕತೆಯಲ್ಲಿ, ಅಭಿಪ್ರಾಯಗಳಲ್ಲಿ ಮತ್ತು ರಸಜ್ಞತೆಯಲ್ಲಿ ಬ್ರಿಟಿಷರಾಗಿರಬೇಕು’’. ಈ ವಾದದ ಮುಂದುವರಿಕೆಯಾಗಿ ನೂತನ ಶಿಕ್ಷಣ ನೀತಿಯ ಪ್ರತಿಪಾದಕರು, ನೆಹರೂರವರನ್ನು ಕಟು ವಿಮರ್ಶೆಗೆ ಒಳಪಡಿಸುತ್ತಾರೆ.

ಅವರ ಪ್ರಕಾರ ನೆಹರೂ ಮಾಡಿದ ಮೊದಲ ತಪ್ಪೆಂದರೆ ವಸಾಹತೋತ್ತರ ಕಾಲಾವಧಿಯಲ್ಲಿ ಉನ್ನತ ಶಿಕ್ಷಣವನ್ನು ಜನಪರ ಶಿಕ್ಷಣದ ಬದಲಿಗೆ ಅಧಿಕಾರಶಾಹಿ ವರ್ಗದ ಶ್ರೇಣೀಕೃತ ಚೌಕಟ್ಟನ್ನಾಗಿ ನಿರೂಪಿಸಿದ್ದು, ಪರಿವರ್ತಿಸಿದ್ದು. ಇದಕ್ಕೆ ಪೂರಕವೆಂಬಂತೆ ವೈಜ್ಞಾನಿಕ ಮನೋಭಾವನೆ ಕುಂಠಿತವಾಗುತ್ತಾ, ಸಮಾಜವಾದದ ಅಧಿಕಾರಶಾಹಿ ವರ್ಗದ ಚೌಕಟ್ಟು ನಿರ್ಮಾಣವಾಯಿತು. ಮಾತ್ರವಲ್ಲದೆ ನೆಹರೂರವರು ಭಾರತದ ಸಂಸ್ಕೃತಿ, ಶಾಸ್ತ್ರೀಯ ಗ್ರಂಥ ಮತ್ತು ವಿವಿಧ ಜ್ಞಾನ ಪರಂಪರೆಯಲ್ಲಿ, ಅದರಲ್ಲೂ ತತ್ವಶಾಸ್ತ್ರ, ಜೀವಶಾಸ್ತ್ರ, ಖಗೋಳ ಭೌತಶಾಸ್ತ್ರ, ಗಣಿತಶಾಸ್ತ್ರದೊಳಗೆ ಅಡಕವಾಗಿದ್ದ ಜ್ಞಾನಲೋಕವನ್ನು ಉಪೇಕ್ಷೆ ಮಾಡಿದರು. ಅಲ್ಲದೆ ನೆಹರೂರವರ ಶಿಕ್ಷಣದ ಚಿಂತನೆಗಳು ಒಬ್ಬ ವಿಮರ್ಶಾತ್ಮಕ ವಿಜ್ಞಾನಿಯನ್ನು ಸೃಷ್ಟಿಸುವ ಬದಲು, ವಿಜ್ಞಾನದ ಸಂಸ್ಥೆಗಳು ರಾಜಕೀಯದ ಚಟುವಟಿಕೆಯ ಕೇಂದ್ರವನ್ನಾಗಿಸುವ ಭಟ್ಟಂಗಿ ಹುಸಿ ಬುದ್ಧಿಜೀವಿಗಳನ್ನು ನಿರ್ಮಿಸುವ ಸಾಧನಗಳಾಗುತ್ತಾ ಹೋದವು. ಇದೇ ಕಾರಣಕ್ಕಾಗಿ ನೂತನ ಶಿಕ್ಷಣ ನೀತಿಯ ಅವಶ್ಯಕತೆಯನ್ನು ಬೆಂಬಲಿಗರು ಪ್ರತಿಪಾದಿಸುತ್ತಾ ಹೋದರು. ಇದೇ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುವುದು ಅನಿವಾರ್ಯ ಮತ್ತು ಅವಶ್ಯಕವೆನಿಸುತ್ತದೆ. ಮೊದಲನೆಯದಾಗಿ ಈ ನೀತಿ ನೆಹರೂ ಮಾದರಿಯ ವೈಫಲ್ಯವನ್ನು ಪಟ್ಟಿ ಮಾಡಿ ನೂತನ ಶಿಕ್ಷಣ ನೀತಿಯ ಅವಶ್ಯಕತೆಯನ್ನು ವಾದಿಸುತ್ತದೆಯೇ? ಈ ನೂತನ ಮತ್ತು ಅದರ ಪೂರ್ವದ ನೀತಿಗಳ ನಡುವೆ ಇರಬಹುದಾದ ವಿಭಿನ್ನತೆಗಳೇನು? ಈ 61 ಪುಟದ ದಾಖಲೆ ಎಷ್ಟು ಕಡೆ ನೆಹರೂರವರನ್ನು ಉಲ್ಲೇಖಿಸುತ್ತದೆ? ಮತ್ತು ವಿಮರ್ಶಿಸುತ್ತದೆ? ವಿಚಿತ್ರವೆಂದರೆ ಈ ನೀತಿ ಎಲ್ಲಿಯೂ ನೆಹರೂರವರನ್ನು ಉಲ್ಲೇಖಿಸುವುದಿಲ್ಲ. ಈ ದಾಖಲೆಯಲ್ಲಿ ನೆಹರೂ ಕಾಣೆಯಾಗಿಬಿಡುತ್ತಾರೆ.

 ನೂತನ ಶಿಕ್ಷಣ ನೀತಿ ತನ್ನ ಅಳವಡಿಕೆಯ ಸಮರ್ಥನೆಗೆ ಉಪಯೋಗಿಸಿದ್ದು ಪ್ರಾಚೀನ ಮತ್ತು ಪ್ರಸ್ತುತ ಸಂದರ್ಭ. ಪ್ರಾಚೀನ ಸಂದರ್ಭದಲ್ಲಿ ಮೂರು ಉಲ್ಲೇಖಗಳು ಪ್ರಮುಖವಾಗುತ್ತವೆ. ಪ್ರಾಚೀನ ಭಾರತೀಯ ಪರಂಪರೆ, ವೈಚಾರಿಕ ಚಿಂತನೆ, ಬಹುಶಿಸ್ತೀಯ ಅಧ್ಯಯನಗಳಿಗೆ ಮತ್ತು ಬೌದ್ಧಿಕ ಚಿಂತನೆಗಳಿಗೆ ಸಾಕ್ಷಿಯಾಗುವ ತಕ್ಷಶಿಲಾ, ನಲಂದಾ, ವಲ್ಲಭಿ ವಿಶ್ವವಿದ್ಯಾನಿಲಯಗಳು ಉಲ್ಲೇಖವಾಗುತ್ತವೆ. ಪ್ರಾಚೀನ ಭಾರತದ ಮಿಮಾಂಸಕಾರರು, ವಿದ್ವಾಂಸರು, ವಿಜ್ಞಾನಿಗಳು ಅಥವಾ ಸಂಶೋಧಕರು- ಇವರನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ‘ಹಿಂದೂ’ವಾಗಿ ನೋಡಲು ಅಸಾಧ್ಯ- ಎರಡನೇ ಉಲ್ಲೇಖದಲ್ಲಿ ಬರುತ್ತಾರೆ. ಅವರಲ್ಲಿ ಚರಕ, ಶುಶ್ರೂತ, ಆರ್ಯಭಟ, ವರಹಮೀರಾ, ಭಾಸ್ಕರಾಚಾರ್ಯ, ಬ್ರಹ್ಮಗುಪ್ತ, ಚಾಣಕ್ಯ, ಚಕ್ರಪಾಣಿದತ್ತ, ಮಾಧವ, ಪಾಣಿನಿ, ಪತಂಜಲಿ, ನಾಗಾರ್ಜುನ, ಗೌತಮ, ಪಿಂಗಳ, ಸಂಕರ್ದೇವ, ಮೈತ್ರೇಯಿ, ಗಾರ್ಗಿ ಮತ್ತು ತಿರುವಲ್ಲರು ಬಹುಮುಖ್ಯವೆನಿಸುತ್ತಾರೆ. ವೈದ್ಯಕೀಯ ಶಾಸ್ತ್ರ, ಗಣಿತಶಾಸ್ತ್ರ, ರಾಜಕೀಯ ಅರ್ಥಶಾಸ್ತ್ರ, ತತ್ವ ಶಾಸ್ತ್ರ, ವ್ಯಾಕರಣ ಶಾಸ್ತ್ರ ಇತ್ಯಾದಿ ಜ್ಞಾನ ಪರಂಪರೆಗೆ ರೂಪಕಗಳಾಗುತ್ತಾರೆ. ಮೂರನೇ ಉಲ್ಲೇಖದಲ್ಲಿ ಮುಖ್ಯವಾಗಿ ಬರುವುದು ಸಂಸ್ಕೃತ ಭಾಷೆ. ಐತಿಹಾಸಿಕ ವಿಸ್ಮತಿಗೊಳಗಾಗಿರುವ ಈ ಭಾಷೆಯನ್ನು ಮತ್ತೊಮ್ಮೆ ಜ್ಞಾನದ ಮುನ್ನೆಲೆಗೆ ತರುವುದೇ ಇಲ್ಲಿನ ಮುಖ್ಯ ಧೋರಣೆ. ಕಾರಣವಿಷ್ಟೇ: ‘‘ಸಂಸ್ಕೃತದಲ್ಲಿ ಇಡೀ ಜ್ಞಾನದ ಭಂಡಾರವಿದೆ’’ ಎಂಬ ಅತಿರಂಜಿತ ವಾದವನ್ನು ಶಿಕ್ಷಣ ನೀತಿ ಮುಂದಿಡುತ್ತದೆ.ಇದನ್ನು ಸನಾತನ ಭಾರತದ ನೆನಪುಗಳು ಎನ್ನಬಹುದು.

 ವಾಸ್ತವವಾಗಿ ವಿವಿಧ ಶಾಸ್ತ್ರಜ್ಞರನ್ನು ಉಲ್ಲೇಖಿಸಿದ್ದರ ಹಿಂದಿರುವ ರಾಜಕಾರಣವನ್ನು ನೋಡಬೇಕು. ಒಂದಿಬ್ಬರನ್ನು ಹೊರತಾಗಿ ಬಹಳಷ್ಟು ಶಾಸ್ತ್ರಜ್ಞರು ಬರೆಯಲು ಉಪಯೋಗಿಸಿದ ಭಾಷೆ ಸಂಸ್ಕೃತ. ಇಡೀ ಶಿಕ್ಷಣ ವ್ಯವಸ್ಥೆಯನ್ನು ‘‘ಸಂಸ್ಕೃತಮಯ’’ವನ್ನಾಗಿಸುವ ಯತ್ನ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಸುಮಾರಿಗೆ ಈ ನೀತಿ ಒಂದೆರೆಡು ವಿದ್ವಾಂಸರನ್ನು ಉಲ್ಲೇಖಿಸುವುದಿಲ್ಲ. ಕೌಟಿಲ್ಯನಿಗೆ ಅರ್ಥಶಾಸ್ತ್ರವನ್ನು ಬರೆಯಲು ಪ್ರಭಾವಿಸಿದ ಪಿಸುಣ, ವ್ಯಟವ್ಯಾದಿ, ಕೌದಪಾದಂತ, ಪರ್ಯಾಯ ಚಿಂತನಶಾಲೆಗಳಾದ ಚಾರ್ವಾಕ, ಅಜ್ವಿಕ, ಅಜ್ಞಾನ, ಕರ್ನಾಟಕದ ಬಸವಣ್ಣ, ವಚನ ಸಾಹಿತ್ಯದ ಜ್ಞಾನ ಪರಂಪರೆ ಕೂಡ ಇಲ್ಲಿ ಉಲ್ಲೇಖವಾಗುವುದಿಲ್ಲ. ವಿಚಿತ್ರವೆಂದರೆ ಈ ನೂತನ ಶಿಕ್ಷಣ ನೀತಿ ಒಂದೆಡೆ ಸನಾತನ ಭಾರತವನ್ನು ಕಲ್ಪಿಸಿದರೆ, ಮತ್ತೊಂದೆಡೆ, ಜಾಗತೀಕರಣದ ಆಯಾಮಗಳನ್ನು ತುಚ್ಛೀಕರಿಸುವುದಿಲ್ಲ, ಅದರ ತಾಂತ್ರಿಕತೆ, ಅಧ್ಯಯನಗಳು, ನಿರಂತರ ಮೌಲ್ಯಮಾಪನ ವ್ಯವಸ್ಥೆ, ಕ್ಲಸ್ಟರ್ ವ್ಯವಸ್ಥೆ, ನಿರ್ಗಮನ ವ್ಯವಸ್ಥೆ ಇತ್ಯಾದಿಗಳನ್ನು ನಿರಾಕರಿಸುವುದಿಲ್ಲ. ಮೇಲ್ನೋಟಕ್ಕೆ ಇದರ ಅಂತಿಮ ಗುರಿ ‘ಸಹಸ್ರಮಾನ ಅಭಿವೃದ್ಧಿ ಗುರಿ 2940’ನ್ನು ಮುಟ್ಟುವುದು. ಇಲ್ಲಿ ಸನಾತನ ಭಾರತದ ಪರಿಕಲ್ಪನೆ ಮತ್ತು ಜಾಗತಿಕ ಜ್ಞಾನದ ಪರಿಕಲ್ಪನೆ ವ್ಯೆರುಧ್ಯವಾಗಿದ್ದರೂ, ಅವುಗಳು ವೈರುಧ್ಯಗಳೆಂದು ಕೂಡ ಚಿತ್ರಿತವಾಗುವುದಿಲ್ಲ, ವಿರೋಧವಾಗಿ ಕೆಲಸ ಮಾಡುವುದಿಲ್ಲ. ಇದೊಂದು ವಿಶಿಷ್ಟವಾದ ಹೈಬ್ರಿಡ್ ಜ್ಞಾನ ವ್ಯವಸ್ಥೆ. ಇಲ್ಲೊಂದು ವಿರೋಧಾಭಾಸವಿದೆ. ಸನಾತನ ಭಾರತ ಮತ್ತು ಜಾಗತಿಕ ಜ್ಞಾನ ಪರಂಪರೆಗಳಿಗಿಂತ ಹೊರತಾದ ಜ್ಞಾನ ಪರಂಪರೆಗಳನ್ನು ತನ್ನ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಉಳಿದ ಜ್ಞಾನ ಪರಂಪರೆಗಳನ್ನು ವಿವಿಧ ಕಾರಣಗಳಿಗಾಗಿ- ಅವೈಚಾರಿಕತೆ, ಪೇಲವ ಇತ್ಯಾದಿಗಳಿಗೆ ನಿರಾಕರಿಸುತ್ತದೆ, ಇಲ್ಲವೇ ಅವುಗಳ ಮೂಲ ಅಸ್ತಿತ್ವವನ್ನೇ ಅಲ್ಲಗಳೆಯುತ್ತದೆ. ಈ ನಿರಾಕರಣೆಯ ರಾಜಕಾರಣಕ್ಕೆ ಬಲಿಯಾಗುವುದು ಅಲ್ಪಸಂಖ್ಯಾತರ, ದಲಿತರ, ಆದಿವಾಸಿಗಳ, ಹಿಂದುಳಿದ ವರ್ಗಗಳ ಜ್ಞಾನ ಪರಂಪರೆ. ಇದನ್ನು ಜ್ಞಾನ ಪರಂಪರೆಯಲ್ಲಿನ ವೈವಿಧ್ಯತೆಯ ನಷ್ಟದ ಪ್ರಾರಂಭವೆನ್ನಬಹುದು.

ಈ ಜ್ಞಾನ ಸಂಕರದ ಅಥವಾ ಹೈಬ್ರಿಡ್ ಜ್ಞಾನದ ನಡುವೆ ನೆಹರೂ ಮಾತ್ರ ಸ್ಥೂಲವಾಗಿ ನೂತನ ಶಿಕ್ಷಣ ನೀತಿಗೆ ಬಾಧಿಸುತ್ತಾ ಹೋಗುತ್ತಾರೆ. ಇದೊಂದು ವಿಚಿತ್ರ ಸ್ಥಿತಿ. ವಾಸ್ತವವಾಗಿ ಈ ನೀತಿಯಲ್ಲಿ ನೆಹರೂ ಪರಿಕಲ್ಪನೆಗಳು ಹೆಚ್ಚು ಕಡಿಮೆ 56 ಕಡೆ ಅಭಿವ್ಯಕ್ತಗೊಳ್ಳುತ್ತದೆ. ಇದರರ್ಥ ಹೊಸ ನೀತಿಯಲ್ಲಿ ಯಥೇಚ್ಛವಾಗಿ ಹಳೆಯ ಅಂಶಗಳಿರುವುದು ಸ್ಪಷ್ಟ. ವಿಚಿತ್ರವೆಂದರೆ ಈ ನೂತನ ನೀತಿ ಹಿಂದಿನ ನೀತಿಯನ್ನು ಉಲ್ಲೇಖಿಸುವಾಗ ಮೂರು ಅಂಶಗಳ ಮೇಲೆ ಒತ್ತು ನೀಡುತ್ತದೆ, ಉಳಿದ ವಿಷಯಗಳು ನಗಣ್ಯವಾಗುತ್ತದೆ. ಅವುಗಳೆಂದರೆ ಅವಕಾಶ, ಸಮಾನತೆ ಮತ್ತು ಶಿಕ್ಷಣದ ಹಕ್ಕು. ಇದೇ ಸಂದರ್ಭದಲ್ಲಿ ನೆಹರೂರವರನ್ನು ಟೀಕಾತ್ಮಕವಾಗಿ ಶಿಕ್ಷಣ ನೀತಿ ವಿಮರ್ಶಿಸುವುದಿಲ್ಲ, ಅದನ್ನು ಪರಾಮರ್ಶಿಸುವುದು ಕೂಡ ಇಲ್ಲ. ನೆಹರೂರವರ ಪರಿಕಲ್ಪನೆಯನ್ನು ಈ ಸಂದರ್ಭದಲ್ಲಿ ಜ್ಞಾನ ಪರಂಪರೆಯಿಂದ ಹೊರಗಿಡುವುದು ಅಷ್ಟು ಸುಲಭವಲ್ಲ. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ, ಬೌದ್ಧಿಕ ಚಿಂತನೆಗಳಲ್ಲಿ, ಅಕಾಡಮಿಕ್ ಸಂಸ್ಥೆಗಳಲ್ಲಿ, ಪಠ್ಯಗಳಲ್ಲಿ, ಕಥನಗಳಲ್ಲಿ ನೆಹರೂ ಕಲ್ಪನೆ ಆಳವಾಗಿ ಬೇರೂರಿರುವುದೇ ಇದಕ್ಕೆ ಕಾರಣ. ಅದರಲ್ಲಿ ಆಧುನಿಕತೆ, ಪ್ರಾಚೀನ ಭಾರತದ ವೈವಿಧ್ಯ ಪರಂಪರೆ, ಜ್ಞಾನದ ಬಹುತ್ವ, ಎಲ್ಲರನ್ನೂ ಒಳಗೊಂಡಿರುವ ಜ್ಞಾನ ಪರಂಪರೆ, ಜಾತ್ಯತೀತತೆ, ಸಹಿಷ್ಣತೆಯ ಸ್ಪರ್ಷವಿರುವುದು ದಿಟ.

ನೂತನ ಶಿಕ್ಷಣ ನೀತಿಯಲ್ಲಿ ‘‘ವಿಮರ್ಶಾತ್ಮಕ ಚಿಂತನೆ’’ಯ ಉಲ್ಲೇಖವಿದೆ. ಇದರ ಮೂಲವನ್ನು ಪ್ರಾಚೀನ ಭಾರತದ ಪರಂಪರೆಯಲ್ಲಿ, ಬೌದ್ಧಿಕ ಚಿಂತನೆಗಳಲ್ಲಿ ಮತ್ತು ಸಂಸ್ಕೃತ ಭಾಷೆಯಲ್ಲಿ ಈ ನೀತಿ ಹುಡುಕುತ್ತದೆ. ಇದರ ಹೊರತಾಗಿಯೂ ಕೂಡ ವಿವಿಧ ಜ್ಞಾನ ಪರಂಪರೆಯಲ್ಲಿ ಇದು ಯಥೇಚ್ಛವಾಗಿತ್ತು ಎಂಬ ಸತ್ಯವನ್ನು ಈ ನೀತಿ ಗುರುತಿಸುವುದಿಲ್ಲ. ಈ ಜ್ಞಾನ ಪರಂಪರೆಗೆ ಒಂದು ನಿರ್ದಿಷ್ಟ ತಾತ್ವಿಕ ಚೌಕಟ್ಟು ದೊರೆತದ್ದು ಸ್ವಾತಂತ್ರೋತ್ತರ ಕಾಲಾವಧಿಯಲ್ಲಿ. ವಿಭಜನೆಯ ನೆನಪುಗಳಿಂದ ಮತ್ತು ವಸಾಹತು ಜ್ಞಾನ ಪರಂಪರೆಯಿಂದ ವಿಭಿನ್ನವಾದ, ದೇಶದ ನವ ನಿರ್ಮಾಣದ ಸಂದರ್ಭದಲ್ಲಿ ಇದು ಅನಿವಾರ್ಯವಾಗಿತ್ತು ಮತ್ತು ಅವಶ್ಯಕವಾಗಿತ್ತು. ಇದು ನೆಹರೂರವರ ಆಧುನಿಕತೆ ಪರಿಕಲ್ಪನೆಯ ಭಾಗವೂ ಆಗಿತ್ತು. ಇದಕ್ಕೆ ಸಮಾನವಾಗಿ ಯುಜಿಸಿ, ಐಸಿಎಂಆರ್, ಎಐಸಿಟಿಸಿ, ಐಐಎಂ, ಐಐಟಿ, ಕೆಂದ್ರೀಯ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಐಸಿಎಚ್‌ಆರ್, ಐಸಿಎಸ್‌ಎಸ್‌ಆರ್, ಯಸಿಸಿಆರ್ ಇತ್ಯಾದಿಗಳು ಸ್ಥಾಪನೆಗೊಂಡವು. ಇವುಗಳ ನಡುವೆ ನೆಹರೂ ಪರಿಕಲ್ಪನೆ ಜ್ಞಾನಾಭಿವೃದ್ಧಿಯಲ್ಲಿ ಮತ್ತು ಶಿಕ್ಷಣದಲ್ಲಿ ವೈವಿಧ್ಯವನ್ನು ಗುರುತಿಸಿ, ವಿವಿಧ ಜ್ಞಾನ ಪರಂಪರೆ ನಡುವೆ ಸಂವಹನವನ್ನು ನಿರ್ಮಿಸಿತ್ತು. ಇದೇ ಸಂದರ್ಭದಲ್ಲಿ ಒಂದು ಪ್ರಶ್ನೆ ಅನಿವಾರ್ಯ: ನೆಹರೂರವರಿಗೆ ಆಧುನಿಕತೆಯ ಧೋರಣೆಗಳ ನಡುವೆ ಪ್ರಾಚೀನ ಭಾರತದ ಕುರಿತು ತಪ್ಪುಕಲ್ಪನೆಗಳು ಇತ್ತೇ? ವಾಸ್ತವವಾಗಿ ನೆಹರೂಗೆ ಗತಕಾಲ ಅತ್ಯಂತ ಪರಮೋಚ್ಚ ಮತ್ತು ಜೀವ ಸಂಕುಲನದ ಭಾಗ.

ಅಲ್ಲದೇ ಗತಕಾಲದಲ್ಲಿ ಜೀವನದ ಪ್ರೀತಿ ಮತ್ತು ಲವಲವಿಕೆಯ ಶಕ್ತಿ ಅಡಕವಾಗಿರುವುದನ್ನು ಗುರುತಿಸುತ್ತಾರೆ. ಅದೇ ಸಂದರ್ಭದಲ್ಲಿ ನೆಹರೂ ಒಬ್ಬ ಗತಕಾಲದ ದೈವಿಕತೆಯನ್ನು ವಿಜೃಂಭಿಸುವ ಒಬ್ಬ ಚಿಂತಕನಾಗಿರಲಿಲ್ಲ. ಈ ವಿಜೃಂಭಣೆೆ, ಅವರ ಪ್ರಕಾರ ಹುಚ್ಚುತನದಿಂದ ಕೂಡಿದ್ದು, ಮಾತ್ರವಲ್ಲದೆ ಅತ್ಯಂತ ಅಪಾಯಕಾರಿಯೂ ಹೌದು. ಇದೇ ಕಾರಣಕ್ಕೆ ‘‘ಗತಕಾಲದ ಸೆರೆ’’ಯಿಂದ ಹೊರಬರಲು ನೆಹರೂ ಬಯಸಿದರೂ, ಗತಕಾಲ ನಮ್ಮೆಂದಿಗೆ ಶಾಶ್ವತವಾಗಿರಬಲ್ಲುದು ಎಂದು ವಾದಿಸುತ್ತಾರೆ. ಅಲ್ಲದೆ ವಿವಿಧ ಜ್ಞಾನ ಪರಂಪರೆಗೆ ಅದರಲ್ಲೂ, ಸಾಹಿತ್ಯ, ತತ್ವಶಾಸ್ತ್ರ, ಸಂಸ್ಕೃತಿ, ಸೌಂದರ್ಯ ಮಿಮಾಂಸೆ ಹಾಗೂ ಸಹಿಷ್ಣುತೆ ಭಾರತದ ಪರಂಪರೆಗೆ ನೀಡಿರುವ ಕೊಡುಗೆಯನ್ನು ನೆಹರೂ ಗುರುತಿಸುತ್ತಾರೆ. ಅದು ಮುಂದೆ ವಿಶ್ವವಿದ್ಯಾನಿಲಯಗಳ ಜ್ಞಾನ ಪರಂಪರೆ, ವೈವಿಧ್ಯಮಯ ಅಕಾಡಮಿಕ್ ಚಿಂತನೆ, ವಿವಿಧ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಜ್ಞಾನಾಭಿವೃದ್ಧಿಯ ಭಾಗಗಳಾಗುತ್ತಾ ಹೋದದ್ದು ದಿಟ. ನೆಹರೂರವರ ಈ ಪರಿಕಲ್ಪನೆ ವ್ಯವಸ್ಥೆಯ ಚಿಂತನೆಯ ಭಾಗವಾಯಿತು, ಮುಂದೆ ಆಳವಾಗಿ ನೆಲೆಯೂರಿತ್ತು. ನೆಹರೂ ನಿಧನರಾದ ನಂತರವೂ ಮುಂದುವರಿಯಿತು. ನೆಹರೂಗೆ ಗತ ಕಾಲ ಬಹಳ ಮುಖ್ಯವಾಗಲು ಇನ್ನೊಂದು ಬಲವಾದ ಕಾರಣವಿತ್ತು.

ಈ ಗತ ಕಾಲದ ವೈಚಾರಿಕತೆ, ವಿಮರ್ಶಾತ್ಮಕ ಮೌಲ್ಯಗಳು, ಜಾತ್ಯತೀತತೆ, ಪ್ರಜಾಪ್ರಭುತ್ವ, ಸಮಾನತೆ, ಸಹಿಷ್ಣುತೆ ಆಧುನಿಕ ಭಾರತದ ನಿರ್ಮಾಣಕ್ಕೆ ಪ್ರೇರಣೆಗಳು ಎಂದು ಭಾವಿಸುತ್ತಾರೆ. ಅಲ್ಲದೆ ಈ ಪರಂಪರೆಯೇ ನಮ್ಮಲ್ಲಿ ಸಾಂಸ್ಕೃತಿಕ ಸಮನ್ವಯತೆಯನ್ನು ಸಾಧಿಸಲು ಸಹಾಯ ಮಾಡಿತ್ತು ಎಂದು ವಾದಿಸುತ್ತಾರೆ. ತಮ್ಮ ಐತಿಹಾಸಿಕ ಪುಸ್ತಕ ‘ಡಿಸ್ಕವರಿ ಆಫ್ ಇಂಡಿಯಾ’ದಲ್ಲಿ ಗತ ಕಾಲದ ನೆನಪುಗಳ ಪ್ರಾಮುಖ್ಯತೆಯನ್ನು ವಿವರಿಸುವ ರೂಪಕ ಬಹಳ ಮಹತ್ವದ್ದು. ‘‘ಭಾರತ ತನ್ನ ಗತಕಾಲವನ್ನು ಮರೆತರೆ, ಭಾರತ ಭಾರತವಾಗಿ ಉಳಿಯಲಾರದು. ಭಾರತದ ಗೌರವ ಮತ್ತು ಅಗಾಧವಾದ ಸಂತೋಷವೂ ಕೂಡ ನಿರ್ನಾಮವಾಗಬಲ್ಲದು’’. ನೆಹರೂರವರ ಅಕಾಡಮಿಕ್ ಲೋಕಜ್ಞಾನ, ವೈಚಾರಿಕತೆಯ ನಿಲುವುಗಳು, ವಿಮರ್ಶಾತ್ಮಕ ಚಿಂತನೆಗಳು ವಿವಿಧ ತಾತ್ವಿಕ ನೆಲೆಯೊಂದಿಗೆ, ವಿವಿಧ ಕಾಲಘಟ್ಟದಲ್ಲಿ ಮುಖಾಮುಖಿಯಾದದ್ದನ್ನು ಮರೆಯಬಾರದು. ಈ ಘರ್ಷಣೆಯಲ್ಲಿ ನೆಹರೂ ಪರಿಕಲ್ಪನೆಯ ಭಾರತ ಒಂದೆಡೆ ಇದ್ದರೆ, ಸನಾತನ ಭಾರತದ ಪರಿಕಲ್ಪನೆ ಮತ್ತೊಂದೆಡೆ ಇತ್ತು. ಈ ಜಗಳಕ್ಕೆ ಬಲಿಯಾದದ್ದು ಮಾತ್ರ ಇತಿಹಾಸದ ಪುಸ್ತಕಗಳು, ನೆಹರೂರವರ ಚಿಂತನೆಗಳಾದ ಜಾತ್ಯತೀತತೆ, ಒಳಗೊಳ್ಳುವಿಕೆ ಇತ್ಯಾದಿಗಳು ಬಹು ಮುಖ್ಯವಾಗಿ ಇತಿಹಾಸದ ಪುಸ್ತಕಗಳ ತಿರುಳುಗಳಾಗಿದ್ದವು. ವಾಸ್ತವವಾಗಿ ನೆಹರೂರವರ ಪರಿಕಲ್ಪನೆಯ ಭಾರತವನ್ನು ಸೋಲಿಸುವುದು ಅಥವಾ ಸನಾತನ ಭಾರತದ ಪರಿಕಲ್ಪನೆಯನ್ನು ಪಠ್ಯ ಪುಸ್ತಕಗಳಲ್ಲಿ ನೆಲೆಗೊಳಿಸುವುದು ಇದರ ಹಿಂದೆ ಇದ್ದ ಮುಖ್ಯ ಉದ್ದೇಶ. ಆದ ಕಾರಣ ಸನಾತನ ಭಾರತಕ್ಕೆ ಇತಿಹಾಸದ ಬರವಣಿಗೆಯನ್ನು ಪ್ರಶ್ನಿಸುವುದು, ಇತಿಹಾಸದ ನಿರ್ಮಿತಿಯನ್ನು ಸಂದೇಹದಿಂದ ನೋಡುವುದು, ಲೇಖಕರನ್ನು ಎಡಪಂಥೀಯರೆಂದು ಚಿತ್ರಿಸುವುದು ಸಾಮಾನ್ಯವಾಯಿತು.

ಇದರ ಆರಂಭವನ್ನು 1970ರ ದಶಕದಲ್ಲಿ ನೋಡಬಹುದು, ಅದರಲ್ಲೂ 1977ರಲ್ಲಿ ಇದರ ತೀವ್ರತೆ ಕಂಡು ಬರುತ್ತದೆ.ಇತಿಹಾಸಕಾರರಾದ ರೋಮಿಲಾಥಾಪರ್, ಬಿಪನ್ ಚಂದ್ರ, ಬರುನ್ ಡೇ, ಆರ್. ಎಸ್. ಶರ್ಮಾರವರಿಂದ ರಚಿತವಾದ ಎನ್‌ಸಿಇಆರ್‌ಟಿಯ ಇತಿಹಾಸದ ಪುಸ್ತಕಗಳು, ಇತಿಹಾಸದ ರಚನೆ ಸನಾತನ ಭಾರತದ ತೀವ್ರ ಟೀಕೆಗೊಳಗಾಯಿತು. ಇದರ ಎರಡನೇ ಹಂತ 2002-2004ರ ನಡುವೆ ಕಂಡು ಬರುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಪಠ್ಯ ರಚನಾ ಸಮಿತಿಯು ಪಠ್ಯ ಪುಸ್ತಕದಲ್ಲಿ ವೇದಿಕ್ ನಾಗರಿಕತೆ, ಹಿಂದೂ ಸಂಸ್ಕೃತಿ ಇತ್ಯಾದಿಗಳನ್ನು ಅಳವಡಿಸಲು ಮುಂದಾದಾಗ ಈ ಸಂಘರ್ಷ ಮುನ್ನೆಲೆಗೆ ಬಂತು.

ನೆಹರೂ ವಿರೋಧಿಗಳಿಗೆ ಪಠ್ಯ ಪುಸ್ತಕಗಳನ್ನು ಎಡ ಪಂಥೀಯರಿಂದ, ರಾಷ್ಟ್ರೀಯ ನಾಯಕರಿಂದ ಮತ್ತು ಕೌಟುಂಬಿಕ ರಾಜಕಾರಣದಿಂದ ಬಿಡುಗಡೆಗೊಳಿಸಬೇಕಿತ್ತು. ಇದರ ಮೂರನೇ ಹಂತ 2014ರ ನಂತರ ಕಂಡು ಬರುತ್ತದೆ. ಇತಿಹಾಸದ ಪುನರ್ ರಚನೆಯ ಯತ್ನ ವಿವಿಧ ರಾಜ್ಯಗಳಲ್ಲಿ ಅದರಲ್ಲೂ ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕದಲ್ಲಿ ನೇರವಾಗಿ ಕಂಡು ಬರುತ್ತದೆ. ಇತಿಹಾಸದ ಕಟ್ಟುವಿಕೆಯಲ್ಲಿ ಶಿವಾಜಿ ಒಬ್ಬ ಉದಾರವಾದಿ ಅರಸನಾಗಿ ಅಭಿವ್ಯಕ್ತಗೊಳ್ಳುತ್ತಾನೆ, ಟಿಪ್ಪುಒಬ್ಬ ರಾಷ್ಟ್ರೀಯವಾದಿಯಾಗಿ ವ್ಯಕ್ತಗೊಳ್ಳದೆ ಬರೀ ಮತಾಂಧನಾಗಿ ರೂಪಿತನಾಗುತ್ತಾನೆ, ಹಳದಿ ಘಾಟ್ ಯುದ್ಧಲ್ಲಿ ಅಕ್ಬರ್ ಬದಲಿಗೆ ರಾಣ ಪ್ರತಾಪ್ ವಿಜಯಿಯಾಗುತ್ತಾನೆ. ಮುಂದಿನ ದಿನಗಳಲ್ಲಿ ಒಂದೆಡೆ ನೆಹರೂ ಪರಿಕಲ್ಪನೆಯ ಭಾರತ ಮತ್ತದರ ಜ್ಞಾನ ಪರಂಪರೆ, ಇನ್ನೊಂದೆಡೆ ಸನಾತನ ಭಾರತ ಮತ್ತು ಜಾಗತಿಕ ಜ್ಞಾನಗಳ ನಡುವಿನ ಹೊಸ ಶಿಕ್ಷಣ ನೀತಿ, ಇವುಗಳ ನಡುವಿನ ಪ್ರತಿರೋಧ ವಾಸ್ತವವಾಗುತ್ತದೆ. ಅದೇನಿದ್ದರೂ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಪ್ರತೀ ಹಂತದಲ್ಲೂ ನೆಹರೂ ಬಾಧಿಸುತ್ತ ಹೋಗುತ್ತಾರೆ. ಯಾವುದು ಹಳೆಯದು? ಯಾವುದು ಹೊಸತು? ಯಾರ ಮತ್ತು ಯಾವ ಭಾರತ? ಎಂಬ ಗೊಂದಲಗಳ ನಡುವೆ ನೆಹರೂರವರ ಚಿಂತನಾ ಕತೆಗಳು ಬಾಧಿಸುವುದು ಸಹಜವಾಗುತ್ತದೆ.

(ಮುಖ್ಯಸ್ಥರು ರಾಜ್ಯಶಾಸ್ತ್ರ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇಮೇಲ್: muzaffar.assadi@gmail.com)

Writer - ಪ್ರೊ.ಮುಜಾಪ್ಫರ್ ಅಸ್ಸಾದಿ

contributor

Editor - ಪ್ರೊ.ಮುಜಾಪ್ಫರ್ ಅಸ್ಸಾದಿ

contributor

Similar News