​ಧೋನಿ ಪುತ್ರಿಗೆ ಬೆದರಿಕೆ: ಆರೋಪಿ ಬಂಧನ

Update: 2020-10-12 05:16 GMT

ಅಹ್ಮದಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಯವರ ಅಪ್ರಾಪ್ತ ವಯಸ್ಸಿನ ಪುತ್ರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಯುವಕನೊಬ್ಬನನ್ನು ಪೊಲೀಸರು ಗುಜರಾತ್‌ನ ಮುಂದ್ರಾದಲ್ಲಿ ರವಿವಾರ ಬಂಧಿಸಿದ್ದಾರೆ.

"ಧೋನಿ ಪತ್ನಿ ಸಾಕ್ಷಿ ಧೋನಿ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಸಹ್ಯಕರ ಬೆದರಿಕೆ ಮೆಸೇಜ್ ಪೋಸ್ಟ್ ಮಾಡಿದ ಆರೋಪದಲ್ಲಿ ನಮ್ನ ಕಪಯಾ ಗ್ರಾಮದ ಯುವಕನನ್ನು ಬಂಧಿಸಿ ಪ್ರಶ್ನಿಸಲಾಗುತ್ತಿದೆ" ಎಂದು ಪಶ್ಚಿಮ ಕಚ್ ಎಸ್ಪಿ ಸೌರಭ್ ಸಿಂಗ್ ಹೇಳಿದ್ದಾರೆ.

ಕೆಕೆಆರ್ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಐಪಿಎಲ್ ಪಂದ್ಯದ ಬಳಿಕ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೆದರಿಕೆ ಸಂದೇಶ ಪೋಸ್ಟ್ ಮಾಡಿದ ಬಗ್ಗೆ  ಯುವಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ರಾಂಚಿ ಪೊಲೀಸರು ಈ ಕುರಿತ ಮಾಹಿತಿಯನ್ನು ಕಚ್ ಪೊಲೀಸರ ಜತೆ ಹಂಚಿಕೊಂಡಿದ್ದರು ಹಾಗೂ ಬೆದರಿಕೆ ಸಂದೇಶದ ಪೋಸ್ಟ್ ಬಗ್ಗೆ ದೃಢಪಡಿಸುವಂತೆ ಕೋರಿದ್ದರು.

"ಬೆದರಿಕೆ ಸಂದೇಶವನ್ನು ಯುವಕ ಪೋಸ್ಟ್ ಮಾಡಿದ್ದಾಗಿ ನಾವು ದೃಢಪಡಿಸಿದ್ದೇವೆ. ರಾಂಚಿ ಪಟ್ಟಣದಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಆತನನ್ನು ಹಸ್ತಾಂತರಿಸಲಾಗುತ್ತದೆ" ಎಂದು ವಿವರಿಸಿದ್ದಾರೆ. ಯುವಕನನ್ನು ವಶಕ್ಕೆ ಪಡೆಯುವ ಸಲುವಾಗಿ ರಾಂಚಿ ಪೊಲೀಸರು ಕಚ್‌ಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧೋನಿ ಪ್ರಸಕ್ತ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ನಾಯಕತ್ವ ವಹಿಸಿದ್ದು, ಯುವಕನ ಬೆದರಿಕೆ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹಲವು ಮಂದಿ ಕ್ರಿಕೆಟಿಗರು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಈ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News