ಮುಂಬೈಯಾದ್ಯಂತ ಏಕಾಏಕಿ ವಿದ್ಯುತ್ ಕಡಿತ, ಕತ್ತಲಲ್ಲಿ ಮುಳುಗಿದ ವಾಣಿಜ್ಯ ನಗರಿ

Update: 2020-10-12 07:38 GMT

  ಮುಂಬೈ: ಮಹಾನಗರದ ಹೆಚ್ಚಿನ ಪ್ರದೇಶಗಳಲ್ಲಿ ಸೋಮವಾರ ಬೆಳಗ್ಗೆ ವಿದ್ಯುತ್ ಸರಬರಾಜು ವೈಫಲ್ಯ ಉಂಟಾದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದ್ದು, ಸ್ವಲ್ಪ ಸಮಯ ಹಲವು ಲೋಕಲ್ ರೈಲುಗಳ ಸಂಚಾರವೂ ಸ್ತಬ್ದವಾಯಿತು.

ಗ್ರಿಡ್ ವೈಫಲ್ಯದಿಂದಾಗಿ ನಗರದಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ ಎಂದು ಬೃಹನ್ ಮುಂಬೈ ವಿದ್ಯುತ್ ಸರಬರಾಜು ಹಾಗೂ ಸಾರಿಗೆ(ಬೆಸ್ಟ್)ವಕ್ತಾರರು ತಿಳಿಸಿದ್ದಾರೆ.
ಟಾಟಾ ವಿದ್ಯುತ್ ಸರಬರಾಜು ವೈಫಲ್ಯದಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿದೆ. ಅನಾನುಕೂಲತೆಗೆ ವಿಷಾದವಿದೆ ಎಂದು ಬೆಸ್ಟ್ ಪೋಸ್ಟ್ ಮಾಡಿದೆ.
ವಿದ್ಯುತ್ ಸರಬರಾಜು ವೈಫಲ್ಯದಿಂದಾಗಿ ಕೆಲವು ಪ್ರದೇಶಗಳ ಟ್ರಾಫಿಕ್ ಸಿಗ್ನಲ್‌ಗಳು ಕೆಲಸ ಮಾಡದೇ ಸ್ತಬ್ದವಾಗಿವೆ. ದೇಶದ ವಾಣಿಜ್ಯ ನಗರಿಯಲ್ಲಿ ಭಾರೀ ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ವೈಫಲ್ಯ ವಾಗಿದ್ದು, ಬೆಳಗ್ಗೆ 10:05ರ ಸುಮಾರಿಗೆ ವಿದ್ಯುತ್ ಸರಬರಾಜು ಅಡಚಣೆಯಾಗಿತ್ತು, ವಿದ್ಯುತ್ ಸರಬರಾಜು ಸರಿಪಡಿಸುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.
ಮುಂದಿನ ಒಂದು ಗಂಟೆಯಲ್ಲಿ ಮುಂಬೈ ಹಾಗೂ ಥಾಣೆ ನಗರದಲ್ಲಿ ವಿದ್ಯುತ್ ಸರಬರಾಜು ಮತ್ತೆ ಆರಂಭವಾಗಲಿದೆ ಎಂದು ರಾಜ್ಯ ಇಂಧನ ಸಚಿವ ನಿತಿನ್ ರಾವತ್ ಹೇಳಿದ್ದಾರೆ.
ವಿದ್ಯುತ್ ವೈಫಲ್ಯದಿಂದಾಗಿ ಉಪನಗರಗಳ ಪಶ್ಚಿಮ ಹಾಗೂ ಸೆಂಟ್ರಲ್ ರೈಲು ಸಂಚಾರ ಸ್ವಲ್ಪ ಸಮಯ ಸ್ಥಗಿತವಾಗಿದ್ದು, ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮತ್ತೆ ರೈಲು ಸಂಚಾರ ಆರಂಭವಾಯಿತು.

ಐಸಿಯುಗಳಲ್ಲಿ ವಿದ್ಯುತ್ ವೈಫಲ್ಯವಾಗುವುುದನ್ನು ತಪ್ಪಿಸಲು ಆಸ್ಪತ್ರೆಗಳು ಕನಿಷ್ಠ 8 ಗಂಟೆಗಳಿಗಾಗುವಷ್ಟು ಡೀಸೆಲ್‌ಗಳ ಸರಬರಾಜನ್ನು ಖಚಿತಪಡಿಸಿಕೊಂಡಿರಬೇಕೆಂದು ಮಹಾನಗರ ಪಾಲಿಕೆಯು ನಗರದ ಆಸ್ಪತ್ರೆಗಳಿಗೆ ಸೂಚಿಸಿದೆ. ಜುಹು, ಅಂಧೇರಿ, ಮೀರಾ ರೋಡ್, ನವಿ ಮುಂಬೈ, ಥಾಣೆ ಹಾಗೂ ಪನ್ವೇಲ್ ವಿದ್ಯುತ್ ವೈಫಲ್ಯದಿಂದ ಹೆಚ್ಚಾಗಿ ಬಾಧಿತ ಪ್ರದೇಶಗಳಾಗಿವೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News