ಕೊಹ್ಲಿ, ಡಿವಿಲಿಯರ್ಸ್‌ 'ನಿಷೇಧ’ಕ್ಕೆ ರಾಹುಲ್ ಆಗ್ರಹಿಸಿದ್ದೇಕೆ ಗೊತ್ತೇ?

Update: 2020-10-15 05:19 GMT

ಹೊಸದಿಲ್ಲಿ : ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯವೊಂದರಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಇಬ್ಬರು ಆಟಗಾರರ ವೈಖರಿ ಹೇಗಿತ್ತು ಎಂದರೆ, ವಿರೋಧಿ ತಂಡದ ನಾಯಕ, ಆ ಇಬ್ಬರು ಆಟಗಾರರ ಮೇಲೆ ಐಪಿಎಲ್ ನಿಷೇಧ ಹೇರಬೇಕು ಎಂದು ಆಗ್ರಹಿಸಿದರು. !

2011ರಲ್ಲಿ ತಂಡಕ್ಕೆ ಸೇರಿಕೊಂಡ ಬಳಿಕ ವಿರಾಟ್ ಕೊಹ್ಲಿ ಹಾಗೂ ಎ.ಬಿ.ಡಿವಿಲಿಯರ್ಸ್‌ ಜೋಡಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ನಿರಂತರ ಉತ್ತಮ ಪ್ರದರ್ಶನದಿಂದಾಗಿ ಈ ಆಟಗಾರರು ಈ ಪೀಳಿಗೆಯ ಅತ್ಯುತ್ತಮ ಬ್ಯಾಟಿಂಗ್ ಪ್ರತಿಭೆಗಳು ಎನಿಸಿಕೊಂಡಿದ್ದಾರೆ. ಇವರ ದಾಖಲೆ ಜತೆಯಾಟಗಳು ತಂಡಕ್ಕೆ ಹಲವು ಬಾರಿ ಗೆಲುವು ತಂದುಕೊಟ್ಟಿವೆ.

2020ರ ಐಪಿಎಲ್‌ನಲ್ಲಿ ಕೂಡಾ ಕೊಹ್ಲಿ-ಡಿವಿಲಿಯರ್ಸ್‌ ಜೋಡಿ ಏಳು ಪಂದ್ಯಗಳ ಪೈಕಿ ಐದನ್ನು ತಂಡಕ್ಕೆ ಗೆಲ್ಲಿಸಿಕೊಟ್ಟಿದೆ. ಇನ್‌ಸ್ಟಾಗ್ರಾಂ ಸಂವಾದದಲ್ಲಿ ಬುಧವಾರ ಮಾತನಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ.ಆರ್.ರಾಹುಲ್ ತಮಾಷೆಗೆ, "ಐಪಿಎಲ್ ಆಯೋಜಕರು ಕೊಹ್ಲಿ ಹಾಗೂ ಡಿವಿಲಿಯರ್ಸ್‌ ಅವರನ್ನು ನಿಷೇಧಿಸಬೇಕು ಎಂದು ನಾನು ಬಯಸುತ್ತೇನೆ" ಎಂದು ಹೇಳಿದರು.

ಇದಕ್ಕಾಗಿ ಟಿ-20/ಐಪಿಎಲ್ ನಿಯಮಾವಳಿಯನ್ನೇ ಬದಲಿಸಬೇಕು ಎಂದು ಅವರು ಸಲಹೆ ನೀಡಿದರು. "ಮುಂದಿನ ವರ್ಷ ನಿಮ್ಮನ್ನು ಹಾಗೂ ಎಬಿಡಿಯನ್ನು ಐಪಿಎಲ್ ನಿಷೇಧಿಸಬೇಕು ಎಂದು ನಾನು ಬಯಸುತ್ತೇನೆ. ಒಂದು ನಿರ್ದಿಷ್ಟ ಸಂಖ್ಯೆಯ ರನ್ ಗಳಿಸಿದ ಬಳಿಕ ಜನ "ಇಷ್ಟು ಸಾಕು" ಎನ್ನಬೇಕು. ನೀವು 5000 ರನ್ ಗಳಿಸಿದ್ದು ಸಾಕು. ಇದೀಗ ನೀವು ಇತರರಿಗೆ ಅವಕಾಶ ಮಾಡಿಕೊಡಬೇಕು" ಎಂದು ರಾಹುಲ್ ತಮಾಷೆಯಾಗಿ ಹೇಳಿದರು.

ಅಬುಧಾಬಿಯಲ್ಲಿ ಶನಿವಾರ ನಡೆದ 24ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೊಲ್ಕತ್ತಾ ವಿರುದ್ಧ ಮತ್ತೊಂದು ಸೋಲು ಕಂಡಿತು. 165 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ನಾಯಕ ಕೆ.ಎಲ್.ರಾಹುಲ್ ಹಾಗೂ ಮಾಯಾಂಕ್ ಅಗರ್‌ವಾಲ್ ಅದ್ಭುತ ಆರಂಭ ಒದಗಿಸಿದ್ದರು. ಆರಂಭಿಕ ಜತೆಯಾಟದಲ್ಲಿ 100ಕ್ಕೂ ಹೆಚ್ಚು ರನ್ ಬಂದಿದ್ದು, ಪಂದ್ಯ ಬಹುತೇಕ ಕೆಕೆಆರ್ ಕೈತಪ್ಪಿತ್ತು. ಆದರೆ ಸುನೀಲ್ ನರೇನ್ ಹಾಗೂ ಪ್ರಸಿದ್ಧ್ ಕೃಷ್ಣ ದಾಳಿಗೆ ಪಂಜಾಬ್ ತಂಡ ನಾಟಕೀಯವಾಗಿ ಕುಸಿದು, ಕೆಕೆಆರ್ ಎರಡು ರನ್‌ಗಳಿಂದ ಗೆದ್ದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News