ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ಪಾಕ್, ಚೀನಾ, ರಶ್ಯ, ಕ್ಯೂಬಾ ಆಯ್ಕೆ

Update: 2020-10-15 18:33 GMT

ವಿಶ್ವಸಂಸ್ಥೆ, ಅ. 15: ಮಾನವಹಕ್ಕು ಗುಂಪುಗಳ ತೀವ್ರ ಪ್ರತಿಭಟನೆಗಳ ಹೊರತಾಗಿಯೂ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ಸದಸ್ಯ ಸ್ಥಾನಗಳನ್ನು ಪಾಕಿಸ್ತಾನ, ಚೀನಾ, ರಶ್ಯ ಮತ್ತು ಕ್ಯೂಬಾ ದೇಶಗಳು ಗೆದ್ದಿವೆ.

ಈ ದೇಶಗಳ ಕಳಪೆ ಮಾನವಹಕ್ಕು ದಾಖಲೆಗಳ ಹಿನ್ನೆಲೆಯಲ್ಲಿ, ಈ ದೇಶಗಳನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ಆರಿಸಬಾರದು ಎಂದು ಒತ್ತಾಯಿಸಿ ಹಲವು ಮಾನವಹಕ್ಕು ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದ್ದವು.

193 ಸದಸ್ಯರ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮಂಗಳವಾರ ನಡೆದ ರಹಸ್ಯ ಮತದಾನದಲ್ಲಿ, ಪಾಕಿಸ್ತಾನವು 169, ಉಝ್ಬೆಕಿಸ್ತಾನ 164, ನೇಪಾಳ 150 ಮತ್ತು ಚೀನಾ 139 ಮತಗಳನ್ನು ಗಳಿಸಿದವು. ಕೇವಲ 90 ಮತಗಳನ್ನು ಪಡೆದ ಸೌದಿ ಅರೇಬಿಯವು ಸ್ಪರ್ಧೆಯಿಂದ ಹೊರಬಿತ್ತು.

ಮಾನವಹಕ್ಕುಗಳ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಸಂಸ್ಥೆಗೆ ಚೀನಾ, ರಶ್ಯ ಮತ್ತು ಕ್ಯೂಬಾಗಳನ್ನು ಆಯ್ಕೆ ಮಾಡಿರುವುದಕ್ಕಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News