ಗಂಡನ ಸಾವಿಗೆ ನೀನೇ ಕಾರಣ ಎಂದು ಸಮಾಜ ಮಾನಸಿಕವಾಗಿ ಕೊಲೆ ಮಾಡಿತ್ತು: ಕುಸುಮಾ

Update: 2020-10-16 12:36 GMT

ಬೆಂಗಳೂರು, ಅ. 16: `ನೊಂದವರಿಗೆ ಮಾತ್ರ ಮತ್ತೊಬ್ಬರ ಕಷ್ಟದ ಅರಿವಾಗುತ್ತದೆ. ಹತಾಶ ಪರಿಸ್ಥಿತಿಯಲ್ಲಿ ವಿದ್ಯೆ ನನ್ನನ್ನು ಬದಲಾವಣೆ ಮಾಡಿದ್ದು, ಕಷ್ಟಪಟ್ಟು ಅಭ್ಯಾಸ ಮಾಡಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದೇನೆ. ಇದೀಗ ಜನರಿಗೆ ಸಹಾಯ ಮಾಡಬೇಕು ಎಂದು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ' ಎಂದು ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನೊಂದವರಿಗೆ ಧ್ವನಿಯಾಗುತ್ತೇನೆ. ನನ್ನಂತೆ ಸಂಕಷ್ಟ ಅನುಭವಿಸುವ ಹೆಣ್ಣು ಮಕ್ಕಳಿಗೆ ಬೆಂಬಲವಾಗಿರುತ್ತೇನೆ. ಜನರ ಕಷ್ಟ ನನಗೆ ಗೊತ್ತಿದೆ. ಏಕೆಂದರೆ ನಾನೂ ಕಷ್ಟವನ್ನು ಅನುಭವಿಸಿಯೇ ಇಲ್ಲಿಗೆ ಬಂದು ನಿಂತಿದ್ದೇನೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಜನತೆ ನನ್ನನ್ನು ಬೆಂಬಲಿಸುವ ಅಚಲ ವಿಶ್ವಾಸದಲ್ಲಿದ್ದೇನೆ ಎಂದು ಹೇಳಿದರು.

ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಬದುಕೇ ಮುಗಿದು ಹೋಯಿತು ಎಂಬ ನೋವಿನಲ್ಲಿದ್ದಾಗ ಗಂಡನ ಸಾವಿಗೆ ನೀನೇ ಕಾರಣ ಎಂದು ದೂಷಣೆ ಮಾಡಿ ಈ ಸಮಾಜ ನನ್ನನ್ನು ಮಾನಸಿಕವಾಗಿ ಕೊಲೆ ಮಾಡಿತ್ತು. ನನ್ನ ತಂದೆ-ತಾಯಿ ನನಗೆ ಕಷ್ಟ ಎಂದರೆ ಏನು ಎಂಬುದನ್ನು ಗೊತ್ತಾಗದಂತೆ ಬೆಳೆಸಿದರು. ಉನ್ನತಾಧಿಕಾರಿ ಮದುವೆಯಾದರೆ ಸುಖವಾಗಿ ಇರಬಹುದು ಎಂದು ಹೇಳಿ ಡಿ.ಕೆ.ರವಿ ಅವರಿಗೆ ಕೊಟ್ಟು ಮದುವೆ ಮಾಡಿದರು. 5 ವರ್ಷದ ಸಾಂಸಾರಿಕ ಜೀವನ ನಡೆದಿತ್ತು. ಇದ್ದಕ್ಕಿದ್ದಂತೆ ರವಿ ಸಾವನ್ನಪ್ಪಿದರು. 26ನೆ ವಯಸ್ಸಿಗೆ ನಾನು ಅತ್ಯಂತ ನೋವನ್ನು ಅನುಭವಿಸಿದೆ ಎಂದು ಅವರು ತಮ್ಮ ನೋವನ್ನು ತೋಡಿಕೊಂಡರು.

ಪತಿಯನ್ನು ಕಳೆದುಕೊಂಡ ನೋವು, ಸಂಕಟದಲ್ಲಿ ಜೀವನವೇ ಮುಗಿದು ಹೊಯ್ತು ಎಂಬ ಹತಾಶ ಪರಿಸ್ಥಿತಿ ಒಂದು ಕಡೆ. ಮತ್ತೊಂದೆಡೆ ರವಿ ಸಾವಿಗೆ ನೀನೇ ಕಾರಣ ಎಂಬ ಚುಚ್ಚು ಮಾತುಗಳು ನನ್ನ ಜತೆಯಲ್ಲಿ ನಿಲ್ಲಬೇಕಾದ ಕುಟುಂಬದವರೇ ನನ್ನ ವಿರುದ್ಧ ನಿಂದನೆಯ ಮಾತುಗಳನ್ನಾಡಲಾರಂಭಿಸಿದರು. ನೀನೇ ಮಾಡಿದ್ದು ಎಂಬ ಆರೋಪ ಕೇಳಿ ಬಂದಾಗ ನಾನು ಕುಸಿದು ಹೋದೆ. ಆ ನಿಂದನೆಯ ಮಾತುಗಳನ್ನು ಎದುರಿಸುವ ಧೈರ್ಯವಿಲ್ಲದೆ ಜೀವನವನ್ನೇ ಮುಗಿಸಿಕೊಳ್ಳುವ ಯೋಚನೆ ಮಾಡಿದೆ. ಆ ಸಂದರ್ಭದಲ್ಲಿ ನನ್ನ ಜತೆ ನಿಂತವರು ತಂದೆ-ತಾಯಿ. ನನ್ನಲ್ಲಿ ಆತ್ಮವಿಶ್ವಾಸ ತುಂಬಿ ನನ್ನನ್ನು ಬದುಕುವಂತೆ ಮಾಡಿದರು ಎಂದು ಅವರು ನೆನಪು ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News