ಕಾಂಗ್ರೆಸ್ ಸೇರುವುದೇ ಒಂದು ಮಹಾಭಾಗ್ಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2020-10-16 16:10 GMT

ಬೆಂಗಳೂರು, ಅ.16: ದೇಶ ಹಾಗೂ ರಾಜ್ಯಗಳನ್ನು ಆಳಿದ ಬಹುತೇಕ ಮಹನೀಯರು ಕಾಂಗ್ರೆಸ್ ಪಕ್ಷದಿಂದಲೆ ತಮ್ಮ ನಾಯಕತ್ವ ಬೆಳೆಸಿಕೊಂಡಿದ್ದಾರೆ. ಈ ದೊಡ್ಡ ಇತಿಹಾಸ ಇರುವ ನಮ್ಮ ಪಕ್ಷದ ಧ್ವಜ ಧರಿಸುವುದೇ ಒಂದು ಮಹಾಭಾಗ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 200ಕ್ಕೂ ಹೆಚ್ಚು ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅವರು ಮಾತನಾಡಿದರು.

ಇವತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಪಾಲಿಗೆ ಬಹಳ ಐತಿಹಾಸಿಕ ದಿನ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ 60 ಸಾವಿರ ಮತಗಳನ್ನು ಪಡೆದಿದ್ದರು. ಈ ಕ್ಷೇತ್ರದ ರಾಜಕಾರಣ, ರಾಜ್ಯದ ರಾಜಕಾರಣ, ಪಕ್ಷದ ನಾಯಕತ್ವ, ಕಾಂಗ್ರೆಸ್ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಆ ಪಕ್ಷದ ಮುಖಂಡರು ಯಾವ ಷರತ್ತೂ ಇಲ್ಲದೆ, ದೊಡ್ಡ ಇತಿಹಾಸವಿರುವ ರಾಷ್ಟ್ರೀಯ ಪಕ್ಷದಲ್ಲಿ ಗುರುತಿಸಿಕೊಳ್ಳಲು ಇಚ್ಛೆಪಟ್ಟು ಆಗಮಿಸಿದ್ದಾರೆ ಎಂದು ಅವರು ಹೇಳಿದರು.

ನಾನು ನಿಮ್ಮೆಲ್ಲರಿಗೂ ಹೇಳುವುದಿಷ್ಟೇ, ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. ಕಾಂಗ್ರೆಸ್ ಸದಸ್ಯರಾಗಿ, ಈ ತ್ರಿವರ್ಣ ಧ್ವಜವನ್ನು ಹಾಕಿಕೊಳ್ಳುವುದೇ ದೊಡ್ಡ ಶಕ್ತಿ. ಈ ದೇಶದ ಯಾವುದೇ ನಾಯಕರನ್ನು ತೆಗೆದುಕೊಳ್ಳಿ. ಆರೆಸೆಸ್ಸ್ ಸ್ಥಾಪಿಸಿದವರಾಗಲಿ, ದೇಶ ಆಳಿದ ಮಹನೀಯರಾಗಲಿ, ರಾಜ್ಯ ಆಳಿದ ನಾಯಕರಾಗಲಿ ಎಲ್ಲರೂ ನೂರಕ್ಕೆ 80 ಭಾಗ ಜನ ಕಾಂಗ್ರೆಸ್ ಪಕ್ಷದಿಂದ ತಮ್ಮ ನಾಯಕತ್ವ ಬೆಳೆಸಿಕೊಂಡು ಬಂದಿದ್ದಾರೆ. ಈ ಇತಿಹಾಸವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಅಂತಹ ಪಕ್ಷಕ್ಕೆ ನೀವು ಸೇರುತ್ತಿರುವುದು ನಿಮಗೂ, ರಾಜ್ಯಕ್ಕೂ, ಕ್ಷೇತ್ರಕ್ಕೆ ಹಾಗೂ ನಮಗೆ ಒಳ್ಳೆಯದೇ ಎಂದು ಅವರು ತಿಳಿಸಿದರು.

ರಾಜರಾಜೇಶ್ವರಿ ನಗರ ಕ್ಷೇತ್ರವು ನನಗೆ ಬಹಳ ಹತ್ತಿರವಾದ ಕ್ಷೇತ್ರ. ನಿಮ್ಮ ಮತ್ತು ಜನರ ನೋವು, ಪರಿಸ್ಥಿತಿ, ಛಲ, ಹೋರಾಟ ನೋಡಿದ್ದೇನೆ. ಶ್ರೀನಿವಾಸ್ ಅವರು 83ರಲ್ಲಿ ಈ ಭಾಗದಲ್ಲಿ ಜನತಾ ಪಕ್ಷದಿಂದ ಈ ಗೆದ್ದಿದ್ದರು. ನಂತರ ಜನತಾದಳ ಇಲ್ಲಿ ಗೆದ್ದಿರಲಿಲ್ಲ. ಕಳೆದ ಎರಡು ಬಾರಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. ನಮ್ಮ ಸರಕಾರ ಇದ್ದ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಅನೇಕ ಕೆಲಸ ಮಾಡಿದೆ ಎಂದು ಶಿವಕುಮಾರ್ ಹೇಳಿದರು.

ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರ ಪರವಾಗಿ ನಿಮಗೆ ಸ್ವಾಗತ ಕೋರುತ್ತೇನೆ. ಬೆಟ್ಟಸ್ವಾಮಿ ಗೌಡರು ಶಾಸಕರಾಗುವ ಅರ್ಹತೆ ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ಅನೇಕ ಮುಖಂಡರು ಇಲ್ಲಿಗೆ ಬಂದಿದ್ದಾರೆ. ಇಲ್ಲಿಗೆ ಬಂದಿರುವ ಯುವಕರು, ಹಿರಿಯರು, ಮಹಿಳೆಯರಿಗೆ ದೊಡ್ಡ ಪಡೆ ಕಟ್ಟುವ ಶಕ್ತಿ ಇದೆ. ಅಧಿಕಾರ ಸಿಗಲಿ, ಬಿಡಲಿ ಪಕ್ಷ ಉಳಿಸಲು ಇವರು ಇಷ್ಟು ದಿನ ಹೋರಾಟ ಮಾಡಿಕೊಂಡು ಬಂದಿದ್ದರು. ಇವರು ನಮ್ಮ ಪಕ್ಷಕ್ಕೆ ಬಂದಿರುವುದು ಬಹಳ ಸಂತೋಷ ಎಂದು ಅವರು ತಿಳಿಸಿದರು.

ಹೊಸಬರು, ಹಳಬರು ಎಂಬ ವ್ಯತ್ಯಾಸ ಇಲ್ಲ. ನೀವು ಪಕ್ಷದ ಧ್ವಜ ಹಿಡಿದು ಪಕ್ಷಕ್ಕೆ ಬಂದಮೇಲೆ ನೀವು ಕಾಂಗ್ರೆಸಿಗರೇ. ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಕೈ ಬಿಡಲ್ಲ. ನಾಳೆ ಬೆಳಗ್ಗೆಯಿಂದಲೇ ಪಕ್ಷ ಸಂಘಟನೆ ಆರಂಭಿಸಿ. ನಾವೆಲ್ಲ ನಿಮ್ಮ ಜತೆ ಇದ್ದೇವೆ. ಧೈರ್ಯದಿಂದ ಈ ಚುನಾವಣೆ ಎದುರಿಸಿ ಎಂದು ಶಿವಕುಮಾರ್ ಕರೆ ನೀಡಿದರು.

ಜೆಡಿಎಸ್ ಪಕ್ಷದ ಸುದ್ದಿ ನನಗ್ಯಾಕೆ?: ಈ ಚುನಾವಣೆ ಮೂಲಕ ಜೆಡಿಎಸ್ ಪಕ್ಷ ಸಮಾಧಿ ಮಾಡುವುದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನನಗೆ ಅವರ ಪಕ್ಷದ ಸುದ್ದಿ ಯಾಕೆ? ಅವರ ಪಕ್ಷ ಸಮಾಧಿ ಮಾಡುವ ಕೆಲಸ ನಮಗೆ ಬೇಡ. ನಮ್ಮ ಪಕ್ಷ ನಮ್ಮದು, ಅವರ ಪಕ್ಷ ಅವರದು. ಅವರು ನನ್ನ ವಿಚಾರಕ್ಕೆ ಬಂದಿಲ್ಲ. ನಾನ್ಯಾಕೆ ಅವರ ಬಗ್ಗೆ ಮಾತನಾಡಲಿ. ಅವರು ನನ್ನ ಹೆಸರು ಹೇಳಿ ಮಾತನಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ರಾಜ್ಯಕ್ಕೆ ಈ ಸರಕಾರ ದೊಡ್ಡ ಶಾಪ: ಬಿಜೆಪಿ ಸರ್ಕಾರಕ್ಕೆ ಜನರ ಕಷ್ಟದ ಬಗ್ಗೆ ಯಾವುದೇ ಅರಿವಿಲ್ಲ. ಅವರ ಕಷ್ಟ, ಸುಖ ಏನೂ ಗೊತ್ತಿಲ್ಲ. ಈ ಹಿಂದೆ ಪ್ರವಾಹ ಬಂದಾಗ ಮಂತ್ರಿಗಳು ಏನು ಹೇಳಿದ್ದರು? ಇಲ್ಲಿ ಏನು ಮಾಡುತ್ತಿದ್ದಾರೆ? ಕೊರೋನ ಇದ್ದಾಗಲೇ ಹೋಗಲಿಲ್ಲ. ಇನ್ನು ಇವಾಗ ಹೋಗುತ್ತಾರಾ? ನಮ್ಮ ರಾಜ್ಯಕ್ಕೆ ಈ ಸರಕಾರ ದೊಡ್ಡ ಶಾಪ ಎಂದು ಶಿವಕುಮಾರ್ ಟೀಕಿಸಿದರು.

ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಿ ಅಲ್ಲಿನ ಜನರಿಗೆ ಧೈರ್ಯ ತುಂಬುವಂತೆ ನಮ್ಮ ಸ್ಥಳೀಯ ನಾಯಕರಿಗೆ ಸೂಚನೆ ಕೊಟ್ಟಿದ್ದೇನೆ. ಅವರು ಆ ಕೆಲಸ ಮಾಡುತ್ತಾರೆ. ನೊಂದ ಜನರಿಗೆ ಪರಿಹಾರ, ತುರ್ತು ನೆರವು ನೀಡುವುದು ಸರಕಾರದ ಜವಾಬ್ದಾರಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ.ಸುರೇಶ್, ಹನುಮಂತರಾಯಪ್ಪ, ಕಾಂಗ್ರೆಸ್ ಸೇರಿದ ಬೆಟ್ಟಸ್ವಾಮಿಗೌಡ ಸೇರಿದಂತೆ ಇನ್ನಿತರ ನಾಯಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News