ಪಾಕ್ ವೇಗಿ ಉಮರ್ ಗುಲ್ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ

Update: 2020-10-17 18:34 GMT

ಕರಾಚಿ: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟ್ವೆಂಟಿ-20 ಕಪ್ ಟೂರ್ನಿಯ ಬಳಿಕ ಎಲ್ಲಾ ರೀತಿಯ ಕ್ರಿಕೆಟ್‌ನಿಂದಲೂ ನಿವೃತ್ತಿಯಾಗುವುದಾಗಿ ಪಾಕಿಸ್ತಾನ ವೇಗದ ಬೌಲರ್ ಉಮರ್ ಗುಲ್ ಶನಿವಾರ ಪ್ರಕಟಿಸಿದ್ದಾರೆ.

   2016ರಲ್ಲಿ ಕೊನೆಯ ಬಾರಿ ಪಾಕಿಸ್ತಾನ ಪರ ಏಕದಿನ ಪಂದ್ಯ ಆಡಿದ 36ರ ಹರೆಯದ ಗುಲ್, ಈ ಬಾರಿ ರಾಷ್ಟ್ರೀಯ ಟ್ವೆಂಟಿ-20 ಕಪ್‌ನಲ್ಲಿ ಬಲೂಚಿಸ್ತಾನ್ ತಂಡದ ಪರ ಕಾಣಿಸಿಕೊಂಡಿದ್ದಾರೆ. ಈ ಟೂರ್ನಿ ರವಿವಾರ ಕೊನೆಗೊಳ್ಳುತ್ತದೆ.

ಅವರ ತಂಡ ಸೆಮಿಫೈನಲ್‌ಗೇರುವಲ್ಲಿ ವಿಫಲವಾಗಿದೆ.

 ‘‘ತುಂಬಾ ಭಾರವಾದ ಹೃದಯದಿಂದ ಮತ್ತು ಸಾಕಷ್ಟು ಆಲೋಚನೆಯ ಬಳಿಕ ಈ ರಾಷ್ಟ್ರೀಯ ಟ್ವೆಂಟಿ 20 ಕಪ್ ನಂತರ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ವಿದಾಯ ಹೇಳಲು ನಾನು ನಿರ್ಧರಿಸಿದ್ದೇನೆ ’’ಎಂದು ಉಮರ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆದಿದ್ದಾರೆ.

‘‘ ನಾನು ಪ್ರಾಮಾಣಿಕವಾಗಿ ಮತ್ತು ಶೇ.100ರಷ್ಟು ಕಠಿಣ ಪರಿಶ್ರಮದಿಂದ ಪಾಕಿಸ್ತಾನ ಪರ ಆಡಿದ್ದೇನೆ. ಕ್ರಿಕೆಟ್ ಯಾವಾಗಲೂ ನನ್ನ ಪ್ರೀತಿ ಮತ್ತು ಉತ್ಸಾಹವಾಗಿರುತ್ತದೆ. ಆದರೆ ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕಾಗಿದೆ ’’ ಎಂದು ಅವರು ಹೇಳಿದರು.

ಪೇಶಾವರ ಮೂಲದ ಗುಲ್ 2003ರಲ್ಲಿ ಏಕದಿನ ಪಂದ್ಯವೊಂದರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆ ವರ್ಷವೇ ಅವರು ತಮ್ಮ ಮೊದಲ ಟೆಸ್ಟ್ ಆಡಿದರು. ಅವರ ಕೊನೆಯ ಟೆಸ್ಟ್ 2013ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವಾಗಿತ್ತು.

47 ಟೆಸ್ಟ್ ಪಂದ್ಯಗಳಿಂದ ಗುಲ್ 34.06 ಸರಾಸರಿಯಲ್ಲಿ 163 ವಿಕೆಟ್ ಪಡೆದಿದ್ದಾರೆ. 130 ಏಕದಿನ ಪಂದ್ಯಗಳಿಂದ 179 ವಿಕೆಟ್‌ಗಳ ಜೊತೆಗೆ 60 ಟ್ವೆಂಟಿ-20 ಪಂದ್ಯಗಳಿಂದ 85 ವಿಕೆಟ್‌ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News