ಪಕ್ಷದ ಸಿದ್ಧಾಂತ, ಅಭ್ಯರ್ಥಿ ಆಧರಿಸಿ ಮತ ಕೇಳುತ್ತೇವೆ : ಡಿ.ಕೆ ಶಿವಕುಮಾರ್

Update: 2020-10-18 10:28 GMT

ಬೆಂಗಳೂರು : 'ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಸಿದ್ಧಾಂತ, ಅಭ್ಯರ್ಥಿಯನ್ನು ಮುಂದಿಟ್ಟು ಮತ ಕೇಳುತ್ತೇವೆ. ಬೇರೆ ಪಕ್ಷಗಳು ಏನು ಮಾಡುತ್ತಿವೆ ಎಂಬುದು ನಮಗೆ ಬೇಕಾಗಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನ ಪಡೆಯಲಿದೆ ಎಂಬ ಬಿಜೆಪಿ ನಾಯಕ ವಿಜಯೇಂದ್ರ ಅವರ ಹೇಳಿಕೆಗೆ ಸಂಬಂಧಿಸಿದಂತೆ, ಸದಾಶಿವನಗರ ನಿವಾಸದಲ್ಲಿ ರವಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು:

'ವಿಜಯೇಂದ್ರ ಅವರಿಗೆ ಒಳ್ಳೆಯದಾಗಲಿ. ಅವರಿಗೆ ಶುಭ ಕೋರುತ್ತೇನೆ. ಯಾರು ಯಾರ ಜತೆಯಾದರೂ ನೆಂಟಸ್ಥನ, ಸಂಬಂಧ ಬೆಳೆಸಲಿ. ಯಾವುದೇ ಮೈತ್ರಿ ಬೇಕಾದರೂ ಮಾಡಿಕೊಳ್ಳಲಿ. ನಾವು ಅದರ ಬಗ್ಗೆ ಚಿಂತಿಸುವುದಿಲ್ಲ. ನಮ್ಮ ಪಕ್ಷದ ಸಿದ್ಧಾಂತ ಮುಂದಿಟ್ಟು ಅಭ್ಯರ್ಥಿಗೆ ಮತ ಕೇಳುತ್ತೇವೆ.' ಎಂದರು.

ಕೊರೋನ ನಿರ್ವಹಣೆಯಲ್ಲಿ ಸರ್ಕಾರ ವಿಫಲ

'ಕೊರೋನ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಬಿಬಿಎಂಪಿ ಆಯುಕ್ತರು, ಇಲಾಖೆಗಳ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಚಿವರನ್ನು ಬದಲಿಸುವ ಮೂಲಕ ಮುಖ್ಯಮಂತ್ರಿಗಳು ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ. ಸರ್ಕಾರದ ಅಸಮರ್ಥತೆ ಯಿಂದ ರಾಜ್ಯದ ಜನ ನರಳುವಂತಾಗಿದೆ.' ಎಂದು ಹೇಳಿದರು.

ಕಾರ್ತಿ ಚಿದಂಬರಂ ಅವರದ್ದು ಸೌಜನ್ಯದ ಭೇಟಿ

'ಕಾರ್ತಿ ಚಿದಂಬರಂ ಅವರದ್ದು ಕೇವಲ ಸೌಜನ್ಯದ ಭೇಟಿ. ರಾಜಕೀಯ ವಿಶೇಷತೆಗಳೇನು ಇಲ್ಲ. ಅವರು ನನ್ನ ಸ್ನೇಹಿತರು. ಸಂಸತ್ ಸದಸ್ಯರಾಗಿರುವ ಅವರು ರಾಜಕೀಯವಾಗಿ ಸಹೋದ್ಯೋಗಿ. ಹೀಗಾಗಿ ನಾವು ಭೇಟಿಯಾದಾಗ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ. ತಮಿಳುನಾಡಿನ ಚುನಾವಣೆಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳಲು ನಮ್ಮ ಹೈಕಮಾಂಡ್ ನಾಯಕರಿದ್ದಾರೆ. ಈ ಚುನಾವಣೆ ಹೇಗೆ ಎದುರಿಸಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ ಎಂದು ಡಿಕೆಶಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News