ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಸಂಸ್ಥಾಪಕ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಷಿ ನಿಧನ

Update: 2020-10-18 14:28 GMT

ಬೆಂಗಳೂರು, ಅ. 18: `ಮೈಸೂರು ಹುಲಿ' ಹಝ್ರತ್ ಟಿಪ್ಪು ಸುಲ್ತಾನ್(ರಅ) ಸಂಯುಕ್ತ ರಂಗದ ಸಂಸ್ಥಾಪಕ ಅಧ್ಯಕ್ಷ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಡನಾಡಿ ಹಾಗೂ ಹಿರಿಯ ಹೋರಾಟಗಾರ ಸರ್ದಾರ್ ಅಹ್ಮದ್ ಖುರೇಷಿ(72) ಅಲ್ಪಕಾಲದ ಅನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಒಂದು ವಾರದ ಹಿಂದೆ ನಗರದ ವೈಟ್‍ಫೀಲ್ಡ್‍ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸರ್ದಾರ್ ಅಹ್ಮದ್ ಖುರೇಷಿ ಅವರು, ಕಿಡ್ನಿಗಳ ವೈಫಲ್ಯದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಅಪಾರ ಬಂಧುಗಳನ್ನು ಹಾಗೂ ಹೆಚ್ಚಿನ ಸಂಖ್ಯೆಯ ಒಡನಾಡಿಗಳನ್ನು ಅಗಲಿದ್ದಾರೆ.

ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿ ಪ್ರಬಲಗೊಳಿಸುವ ಹಾದಿಯಲ್ಲಿ ಸರ್ದಾರ್ ಅಹ್ಮದ್ ಖುರೇಷಿ ಮುಂಚೂಣಿಯಲ್ಲಿದ್ದರು. ಅಲ್ಲದೆ, ತಮ್ಮದೇ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಮೂಲಕ 1 ಲಕ್ಷ ರೂ.ನಗದು ಒಳಗೊಂಡ `ಟಿಪ್ಪು ಸುಲ್ತಾನ್ ಪ್ರಶಸ್ತಿ'ಯನ್ನು ಪ್ರತಿ ವರ್ಷ ಪ್ರದಾನ ಮಾಡುತ್ತಿದ್ದರು.

ಇದಲ್ಲದೆ, ಕನ್ನಡ ಪರವಾದ ಹೋರಾಟಗಳು, ರೈತರ ಚಳವಳಿಗಳು ಹಾಗೂ ದಲಿತ ಪರವಾದ ಹೋರಾಟಗಳಲ್ಲಿಯೂ ಸದಾ ಸಕ್ರಿಯವಾಗಿದ್ದ ಸರ್ದಾರ್ ಅಹ್ಮದ್ ಖುರೇಷಿ, ಸಮಾಜದ ಎಲ್ಲ ವರ್ಗಗಳ ಜನರ ಗೌರವಕ್ಕೆ ಪಾತ್ರರಾಗಿದ್ದರು. ಮೃತರ ದಫನ ಕಾರ್ಯವನ್ನು ನಗರದ ವರ್ತೂರಿನಲ್ಲಿರುವ ಖಬರಸ್ಥಾನ್‍ನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜಾತ್ಯತೀತ ನಾಯಕನ ಕಣ್ಮರೆ

ಜಾತಿ, ಧರ್ಮದ ತಾರತಮ್ಯವಿಲ್ಲದೆ, ನ್ಯಾಯಕ್ಕಾಗಿ ಹೋರಾಡುವ ಮನೋಭಾವನೆಯನ್ನು ಸರ್ದಾರ್ ಅಹ್ಮದ್ ಖುರೇಷಿ ಹೊಂದಿದ್ದರು. ಮಾನವ ಜಾತಿಯೆ ಶ್ರೇಷ್ಠವಾದದ್ದು ಎಂದು ಪ್ರತಿಪಾದಿಸುತ್ತಿದ್ದ ಜಾತ್ಯತೀತ ನಾಯಕ. ನಮ್ಮ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಬಹುಮುಖ್ಯವಾದದ್ದು

-ಡಾ.ದಾವೂದ್ ಇಕ್ಬಾಲ್, ಪ್ರಧಾನ ಕಾರ್ಯದರ್ಶಿ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News