ಭಾರತದ ಜೀವಾಳವಾದ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

Update: 2020-10-18 16:05 GMT

ಬೆಂಗಳೂರು, ಅ. 18: ಜಗತ್ತಿನಾದ್ಯಂತ ಹೆಸರಾಗಿರುವುದು ಈ ದೇಶದ ಜಾತ್ಯತೀತತೆ ಹಾಗೂ ವಿವಿಧತೆಯಲ್ಲಿ ಏಕತೆ ಹೊಂದಿದೆ. ಆದರೆ ಪ್ರಸ್ತುತ ಸಂದರ್ಭ ಹೇಗಿದೆಯೆಂದರೆ ಭಾರತದ ಜೀವಾಳವಾದ ಪ್ರಜಾಪ್ರಭುತ್ವವೇ ಈಗ ಅಪಾಯದಲ್ಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪರವಾಗಿ ನಡೆದ ಚುನಾವಣೆ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶ ಕಟ್ಟಕಡೆಯ ಪ್ರಜೆಯೂ ನಿರ್ಭೀತಿಯಿಂದ ಬದುಕು ಸಾಗಿಸಬೇಕಾದರೆ ಈ ಕೆಟ್ಟ ಪರಿಸ್ಥಿತಿಯಿಂದ ನಾವು ಹೊರಬರಬೇಕು. ಇದಕ್ಕಾಗಿ ವಿದ್ಯಾವಂತರು ಸಂಘಟಿತರಾಗಬೇಕು. ವಿವೇಕದಿಂತ ತಾವೆಲ್ಲರೂ ಚಿಂತಿಸಿ ಭಾರತದ ಭವಿಷ್ಯದ ದೃಷ್ಟಿಯಿಂದ ಉತ್ತಮ ಅಭ್ಯರ್ಥಿಯನ್ನು ಬೆಂಬಲಿಸಬೇಕಿದೆ. ಈ ನಿಟ್ಟಿನಲ್ಲಿ  ಸಮಾಜದ ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವ ನಮ್ಮ ಅಭ್ಯರ್ಥಿ ಪ್ರವೀಣ್ ಪೀಟರ್ ರವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಭಾರತದ ಸಾರ್ವಭೌಮತ್ವ ಹಾಗೂ ಪ್ರಜಾಪ್ರಭುತ್ವ ಈಗ ಅಪಾಯದಲ್ಲಿವೆ. ಪ್ರಸ್ತುತ ಸಂಧರ್ಭ ಭಾರತದ ಐಕ್ಯತೆಗೆ ದೊಡ್ಡ ಸವಾಲಿನ ಸಂದರ್ಭವಾಗಿದೆ. ಈಗ ವಿದ್ಯಾವಂತರಾದವರು ಭಾರತದ ಭವಿಷ್ಯದ ಕುರಿತು ಚಿಂತಿಸಬೇಕಿದೆ. ಯಾಕೆಂದರೆ ನಮ್ಮ ಮುಂದಿನ ಪೀಳಿಗೆಗೆ ನಾವು ಇದೇ ಭಾರತವನ್ನು ಕೊಡುಗೆಯಾಗಿ ನೀಡಬೇಕಾಗಿದೆ ಈ ನಿಟ್ಟಿನಲ್ಲಿ ಈಗ ಬರುವ ಚುನಾವಣೆ ಬಹಳ ಮುಖ್ಯ. ವಿದ್ಯಾವಂತರು ಸಂಘಟಿತರಾಗಿ ದೇಶದ ಭವಿಷ್ಯಕ್ಕಾಗಿ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಬೇಕಿದೆ ಎಂದರು.

ನಂತರ ಮಾತನಾಡಿದ ಅಭ್ಯರ್ಥಿ ಪ್ರವೀಣ್ ಪೀಟರ್, ಶಿಕ್ಷಕರು ಈ ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಇರುವವರು. ಅವರು ನಿಶ್ಚಿಂತೆಯಿಂದ ಭವಿಷ್ಯದ ಬಗ್ಗೆ ಚಿಂತಿಸಬೇಕಾದರೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದರೆ ಶಿಕ್ಷಕರಿಗೆ ಅವರು ಕೇಳುವ ಸವಲತ್ತುಗಳನ್ನು ನೀಡಬೇಕಿದೆ. ಮೂಲಭೂತ ಸೌಕರ್ಯಗಳನ್ನು ನೀಡಬೇಕಿದೆ. ಶಿಕ್ಷಕರ ಕಾರ್ಯ ಒತ್ತಡವನ್ನು ಸರ್ಕಾರಗಳು ಅರಿತುಕೊಳ್ಳಬೇಕಿದೆ. ಹೀಗಾಗಿ ಶಿಕ್ಷಕರ ಆಗು-ಹೋಗುಗಳನ್ನು ಅರಿತ ನಾನು ಅವರ ಸೇವೆ ಮಾಡಲು ಇದು ಉತ್ತಮ ಅವಕಾಶ ಎಂದು ಈ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.

ನನ್ನ ಪಕ್ಷದ ವರಿಷ್ಠರು ನನಗೆ ಈ ಅವಕಾಶ ಕೊಟ್ಟಿದ್ದಾರೆ. ನಾನು ಅತ್ಯಂತ ಪ್ರಮಾಣಿಕವಾಗಿ ಶಿಕ್ಷಕರ ಪರವಾಗಿ ಪರಿಷತ್ ನಲ್ಲಿ ಧ್ವನಿ ಎತ್ತುತ್ತೇನೆ ಮತ್ತು ಶಿಕ್ಷಕರ ಎಲ್ಲ ಅವಶ್ಯಕತೆಗಳ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇನೆ ಹೀಗಾಗಿ ದಯವಿಟ್ಟು ನನಗೆ ಇದೊಂದು ಅವಕಾಶ ಮಾಡಿಕೊಡಿ ಎಂದರು. ಸಭೆಯಲ್ಲಿ ಬಸವನಗುಡಿ ಮಾಜಿ ಶಾಸಕ ಕೆ.ಚಂದ್ರಶೇಖರ್, ಡಿಸಿಸಿ ಅಧ್ಯಕ್ಷ ಕೃಷ್ಣಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News