ಎರಡೆರಡು ಬಾರಿ 'ಸೂಪರ್ ಓವರ್': ರೋಚಕ ಹಣಾಹಣಿಯಲ್ಲಿ ಗೆಲುವಿನ ನಗೆ ಬೀರಿದ ಕಿಂಗ್ಸ್‌ ಪಂಜಾಬ್

Update: 2020-10-18 18:53 GMT

ದುಬೈ: ರೋಚಕವಾಗಿ ಸಾಗಿದ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ್ ನಡುವಿನ ಪಂದ್ಯವು ಎರಡೆರಡು ಬಾರಿ 'ಟೈ' ಆಗಿದ್ದು, ಈ ಮೂಲಕ ಇಂದಿನ ಎರಡೂ ಪಂದ್ಯಗಳಲ್ಲಿ ಒಟ್ಟು 3 ಸೂಪರ್ ಓವರ್ ಗಳ ಆಟ ನಡೆಯಿತು. 

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 176 ರನ್ ಕಲೆಹಾಕಿತು. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 53 ರನ್ ಗಳಿಸಿದರು. ಕೊನೆಯಲ್ಲಿ ಕೇವಲ 12 ಎಸೆತಗಳನ್ನು ಎದುರಿಸಿದ ಪೊಲಾರ್ಡ್‌ 34 ರನ್‌ ಬಾರಿಸಿದರೆ, ಇಷ್ಟೇ ಎಸೆತಗಳನ್ನು ಆಡಿದ ನಥನ್ ಕಲ್ಟರ್‌ನೈಲ್‌ 24 ರನ್‌ ಗಳಿಸಿದರು.

ಮುಂಬೈ ನೀಡಿದ 177 ರನ್ ಗುರಿ ಬೆನ್ನತ್ತಿದ ಪಂಜಾಬ್ ಕೂಡಾ 176 ರನ್ ಕಲೆಹಾಕಿ ಪಂದ್ಯವನ್ನು ಟೈ ಮಾಡಿಕೊಂಡಿತು. ನಾಯಕ ರಾಹುಲ್ ಮತ್ತೊಮ್ಮೆ ಮಿಂಚಿದರು. ಅವರು 51 ಎಸೆತಗಳಲ್ಲಿ 77 ರನ್ ಗಳಿಸಿ ಔಟಾದರು.

ಕೊನೆಯ ಓವರ್ ನಲ್ಲಿ ಪಂಜಾಬ್ ಗೆ 9 ರನ್ ಅಗತ್ಯವಿತ್ತು. ಆದರೆ ಹೂಡಾ- ಜೋರ್ಡನ್ ಜೋಡಿ 8 ರನ್ ಗಳಿಸಲಷ್ಟೇ ಶಕ್ತವಾಯಿತು.

ಬಳಿಕ ನಡೆದ ಸೂಪರ್ ಓವರ್ ನಲ್ಲಿ ಜಸ್ಪ್ರೀತ್ ಬುಮ್ರಾ ದಾಳಿಗೆ ಪಂಜಾಬ್ 5 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಮುಹಮ್ಮದ್ ಶಮಿ ದಾಳಿಯನ್ನು ಎದುರಿಸಲಾಗದೆ 5 ರನ್ ಗಳಿಸಿ ಮತ್ತೊಮ್ಮೆ ಟೈ ಮಾಡಿಕೊಂಡಿತು.

ಬಳಿಕ ನಡೆದ ಮತ್ತೊಂದು ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 11 ರನ್ ಗಳಿಸಿತು. ಗುರಿ ಬೆನ್ನತ್ತಿದ ಪಂಜಾಬ್ ಇನ್ನೆರಡು ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News