ಮಹಾರಾಷ್ಟ್ರ: ಎನ್‌ಕೌಂಟರ್‌ನಲ್ಲಿ ಐವರು ನಕ್ಸಲೀಯರ ಹತ್ಯೆ

Update: 2020-10-19 03:49 GMT

ನಾಗ್ಪುರ, ಅ.19: ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ ರವಿವಾರ ಸಂಜೆ ಪೊಲೀಸರು ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಐವರು ನಕ್ಸಲೀಯರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ 4ರ ಸುಮಾರಿಗೆ ಕೋಸ್ಮಿ-ಕಿನ್ಸೇಲಿ ದಟ್ಟ ಅರಣ್ಯದಲ್ಲಿ ಈ ಕಾಳಗ ನಡೆಯಿತು ಎಂದು ಗಡಚಿರೋಲಿ ಎಸ್ಪಿ ಅಂಕಿತ್ ಹೇಳಿದ್ದಾರೆ. "ಗಡಚಿರೋಲಿ ಪೊಲೀಸ್ ಪಡೆಯ ಸಿ-60 ಕಮಾಂಡೋಗಳು ಧನೋರಾ ತಾಲೂಕಿನ ಕೋಸ್ಮಿ-ಕಿನ್ಸೇಲಿ ದಟ್ಟ ಅರಣ್ಯದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲರು ಗುಂಡು ಹಾರಿಸಲು ಆರಂಭಿಸಿದರು. ಪೊಲೀಸ್ ತಂಡ ಪ್ರತಿದಾಳಿ ನಡೆಸಿದಾಗ ನಕ್ಸಲರು ತಪ್ಪಿಸಿಕೊಂಡರು" ಎಂದು ವಿವರ ನೀಡಿದ್ದಾರೆ.

ಬಳಿಕ ಶೋಧ ಕಾರ್ಯಾಚರಣೆ ನಡೆಸಿದಾಗ ಐವರು ನಕ್ಸಲೀಯರ ಮೃತದೇಹಗಳನ್ನು ಪತ್ತೆ ಮಾಡಲಾಯಿತು. ಆದರೆ ಇವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

"ಸುಮಾರು 45 ನಿಮಿಷ ಕಾಲ ಗುಂಡಿನ ಚಕಮಕಿ ನಡೆದಿದೆ. ನಾಲ್ವರು ಮಹಿಳೆಯರು ಸೇರಿದಂತೆ ಐದು ಮಂದಿ ನಕ್ಸಲರು ಈ ಹೋರಾಟದಲ್ಲಿ ಅಸು ನೀಗಿದ್ದಾರೆ. ಇನ್ಸಾಸ್ ರೈಫಲ್ ಸೇರಿದಂತೆ ಐದು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ವಿವರ ನೀಡಿದರು.
ಈ ಘಟನೆ ಹಿನ್ನೆಲೆಯಲ್ಲಿ ಗಡಚಿರೋಲಿ ಪೊಲೀಸರು ನಕ್ಸಲರ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News