ಡೆನ್ಮಾರ್ಕ್ ಓಪನ್ :ಒಕುಹರಾ, ಆಂಟೊನ್ಸೆ ನ್ ಚಾಂಪಿಯನ್

Update: 2020-10-19 18:37 GMT

ಒಡೆನ್ಸ್, ಅ.19: ಡೆನ್ಮಾರ್ಕ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್ಸೆನ್ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಜಪಾನ್‌ನ ನರೊಮಿ ಒಕುಹರಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

  ಏಳು ಫೈನಲ್‌ಗಳಲ್ಲಿ ಸೋಲು ಅನುಭವಿಸಿದ್ದ ಒಕುಹರಾ ಒಡೆನ್ಸ್‌ನಲ್ಲಿ ರವಿವಾರ ನಡೆದ ಡೆನ್ಮಾರ್ಕ್ ಓಪನ್ ಬಿಡಬ್ಲುಎಫ್ ಸೂಪರ್ -750 ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಜಯ ಗಳಿಸುವ ಮೂಲಕ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

ಒಕುಹರಾ ಅವರು ಸ್ಪೇನ್‌ನ ಮರಿನ್ ಅವರನ್ನು 21-19, 21-17 ನೇರ ಸೆಟ್‌ಗಳಿಂದ ಮಣಿಸುವ ಮೂಲಕ 8ನೇ ಪ್ರಯತ್ನದಲ್ಲಿ ಗೆಲುವು ದಾಖಲಿಸಿದ್ದಾರೆ.

   ನವೆಂಬರ್ 2018ರ ನಂತರ ಜಪಾನಿನ ಮಾಜಿ ವಿಶ್ವ ಚಾಂಪಿಯನ್ ಒಕುಹರಾ ಮೊದಲ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಒಕುಹರಾ ಅವರು ಒಲಿಂಪಿಕ್ ಚಾಂಪಿಯನ್ ಮರಿನ್‌ರನ್ನು ಸೋಲಿಸಲು 56 ನಿಮಿಷಗಳನ್ನು ತೆಗೆದುಕೊಂಡರು.

   

ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್ಸೆನ್ ಅವರು ತನ್ನ ದೇಶದ ರಾಸ್ಮಸ್ ಜೆಮ್ಕೆ ವಿರುದ್ಧ 18-21, 21- 19, 21-12ರಿಂದ ಜಯಗಳಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು. ‘‘ಪ್ರಶಸ್ತಿಯ ದೀರ್ಘ ಬರವನ್ನು ಕೊನೆಗೊಳಿಸಿದ ನಂತರ ನಿರಾಳರಾದ ಒಕುಹರಾ ಅವರು ಗೆಲುವಿನಿಂದ ಸಂತೋಷವಾಗಿದೆ. ದೀರ್ಘಕಾಲದವರೆಗೆ ನನಗೆ ಯಾವುದೇ ಪ್ರಶಸ್ತಿ ಇರಲಿಲ್ಲ. ರಕ್ಷಣಾ ಮತ್ತು ಹೆಜ್ಜೆಗುರುತುಗಳ ಬಗ್ಗೆ ಹೆಚ್ಚು ಗಮನಹರಿಸಿರುವುದರಿಂದ ಪ್ರಶಸ್ತಿ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿದರು.

  ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಇಂಗ್ಲೆಂಡ್‌ನ ಮಾರ್ಕಸ್ ಎಲ್ಲಿಸ್ ಮತ್ತು ಕ್ರಿಸ್ ಲ್ಯಾಂಗ್ರಿಡ್ ಅವರು ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ವ್ಲಾಡಿಮಿರ್ ಇವನೊವ್ ಮತ್ತು ರಷ್ಯಾದ ಇವಾನ್ ಸೊಜೊನೊವ್ ವಿರುದ್ಧ 20-22, 21-17, 21-18ರಿಂದ ಜಯಗಳಿಸಿ ಪ್ರಶಸ್ತಿ ಎತ್ತಿದರು. ಮಹಿಳಾ ಡಬಲ್ಸ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿಯರಾದ ಯೂಕಿ ಫುಕುಶಿಮಾ ಮತ್ತು ಸಯಕಾ ಹಿರೋಟಾ ಅವರು ಎರಡನೇ ಶ್ರೇಯಾಂಕದ ಮಯು ಮಾಟ್ಸುಮೊಟೊ ಮತ್ತು ವಕಾನಾ ನಾಗಹರಾ ಅವರನ್ನು 21-10, 16-21, 21-18ರಿಂದ ಸೋಲಿಸಿ ಪ್ರಶಸ್ತಿ ಬಾಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News