ಅಚ್ಚರಿಯ ನಡೆ: ಬ್ಯಾಡ್ಮಿಂಟನ್ ರಾಷ್ಟ್ರೀಯ ಶಿಬಿರ ತೊರೆದ ಪಿ.ವಿ.ಸಿಂಧೂ

Update: 2020-10-20 04:34 GMT

ಹೈದರಾಬಾದ್, ಅ.20: ಒಲಿಂಪಿಕ್ ಆಕಾಂಕ್ಷಿಗಳಿಗಾಗಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರವನ್ನು ಖ್ಯಾತ ಬ್ಯಾಡ್ಮಿಂಟನ್ ಪಟು ಪಿ.ವಿ.ಸಿಂಧೂ ತೊರೆದಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಶಿಬಿರ ತೊರೆದಿರುವ ಸಿಂಧೂ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಪುನಶ್ಚೇತನ ಮತ್ತು ಪೌಷ್ಟಿಕತೆ ಹೆಚ್ಚಿಸಿಕೊಳ್ಳುವ ಸಂಬಂಧ ಬ್ರಿಟನ್‌ಗೆ ತೆರಳಿರುವುದಾಗಿ ಸಿಂಧೂ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಕಳೆದ ಹತ್ತು ದಿನಗಳಿಂದ ಸಿಂಧೂ ಲಂಡನ್‌ನಲ್ಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಒಲಿಂಪಿಕ್ ಪದಕದ ಕನಸು ಕಾಣುತ್ತಿರುವ ಆಟಗಾರ್ತಿ ರಾಷ್ಟ್ರೀಯ ಶಿಬಿರದ ಮಧ್ಯದಲ್ಲೇ ತೊರೆದಿರುವುದಲ್ಲದೇ ತಮ್ಮ ಪೋಷಕರೂ ಇಲ್ಲದೇ ಏಕಾಂಗಿಯಾಗಿ ವಿದೇಶ ಪ್ರಯಾಣ ಬೆಳೆಸಿರುವುದು ಅಚ್ಚರಿಗೆ ಕಾರಣವಾಗಿದೆ. ಗಟೊರೇಟ್ ಕ್ರೀಡಾ ವಿಜ್ಞಾನ ಸಂಸ್ಥೆಯ ರೆಬಾಕಾ ರಾಂಡೆಲ್ ಸೇರಿದಂತೆ ಹಲವು ಮಂದಿ ತಜ್ಞರು ಈ ಬೆಳವಣಿಗೆಯನ್ನು ನಿಕಟವಾಗಿ ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ವಿಶ್ವದ ಮಾಜಿ ನಂ.2 ಆಟಗಾರ್ತಿ ಮುಂದಿನ ಎರಡು ತಿಂಗಳು ಬ್ರಿಟನ್‌ನಲ್ಲಿ ಕಳೆಯುವ ನಿರೀಕ್ಷೆ ಇದೆ.

ಸಿಂಧೂ ಕುಟುಂಬದ ಜತೆ ಮುನಿಸಿಕೊಂಡು ಬ್ರಿಟನ್‌ಗೆ ತೆರಳಿದ್ದಾರೆ ಎನ್ನಲಾಗಿದ್ದು, ಮುಂದಿನ ಎಂಟರಿಂದ ಹತ್ತು ವಾರ ಕಾಲ ತಾವು ಭಾರತಕ್ಕೆ ಮರಳುವುದಿಲ್ಲ ಎಂದು ಪುಲ್ಲೇಲ ಗೋಪಿಚಂದ್ ಅಕಾಡಮಿಯ ತರಬೇತುದಾರರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

"ಕೆಲ ವಿಷಯಗಳ ಬಗ್ಗೆ ಸಿಂಧೂ ಬೇಸರಿಸಿಕೊಂಡಿದ್ದು, ಅವರನ್ನು ಮನೆಗೆ ಮರಳುವಂತೆ ಮನವೊಲಿಸುವ ಪ್ರಯತ್ನ ನಡೆದಿದೆ" ಎಂದು ಮೂಲಗಳು ಹೇಳಿವೆ. ಇಂಗ್ಲೆಂಡ್ ತಂಡದ ಜತೆ ಸಿಂಧೂ ತರಬೇತಿಗೆ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿಯೂ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News