ಎಮ್ಮೆ ಸವಾರಿ ಮಾಡಿ ನಾಮಪತ್ರ ಸಲ್ಲಿಸಲು ಆಗಮಿಸಿದ ಪಕ್ಷೇತರ ಅಭ್ಯರ್ಥಿ

Update: 2020-10-20 07:32 GMT
Photo: ANI

ಪಾಟ್ನಾ: ಬಿಹಾರದ ಬಹಾದುರ್‍ಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲುದ್ದೇಶಿಸಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ಎಮ್ಮೆ ಮೇಲೆ ಸವಾರಿ ಮಾಡಿಕೊಂಡು ನಾಮಪತ್ರ ಸಲ್ಲಿಸಲು ದರ್ಭಾಂಗ ನಗರಕ್ಕೆ ಆಗಮಿಸಿ ಕುತೂಹಲ ಮೂಡಿಸಿದ್ದಾರೆ. ನಚಾರಿ ಮಂಡಲ್ ಎಂಬ ಹೆಸರಿನ ಅಭ್ಯರ್ಥಿ ಎಮ್ಮೆ ಮೇಲೆ ಕುಳಿತುಕೊಂಡು ಆಗಮಿಸಿದರೆ ಅವರನ್ನು ಹಲವಾರು ಬೆಂಬಲಿಗರು ಹಿಂಬಾಲಿಸಿದ್ದರು. ಈ ಕುರಿತಾದ ವೀಡಿಯೋ ಒಂದನ್ನು ಎಎನ್‍ಐ ಪೋಸ್ಟ್ ಮಾಡಿದೆ

"ನಾನೊಬ್ಬ ಬಡ ಮತ್ತು ದುರ್ಬಲ ವರ್ಗಕ್ಕೆ ಸೇರಿದವನು. ಕೃಷಿ ಕಾರ್ಮಿಕನೊಬ್ಬನ ಪುತ್ರ ನಾನು, ನನ್ನಲ್ಲಿ ಚತುಷ್ಚಕ್ರ ವಾಹನವಿಲ್ಲ, ಅದಕ್ಕಾಗಿ ಎಮ್ಮೆ ಸವಾರಿ ಮಾಡಿ ನಾಮಪತ್ರ ಸಲ್ಲಿಸಲು ಆಗಮಿಸಿದೆ,'' ಎಂದು ನಚಾರಿ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ತಾನು ಗೆದ್ದರೆ ರೈತರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ ಹಾಗೂ ಸರಕಾರ ಒದಗಿಸುವ ಸವಲತ್ತುಗಳನ್ನು ದುರ್ಬಲ ವರ್ಗಗಳಿಗೆ ತಲುಪಿಸಲು ಶ್ರಮಿಸುವುದಾಗಿ ಅವರು ತಿಳಿಸಿದರು.

"ಹಿಂದಿನ ಶಾಸಕರು ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಇರುವುದರಿಂದ ಜನರಲ್ಲಿ ಆಕ್ರೋಶವಿದೆ,'' ಎಂದೂ ಅವರು ಹೇಳಿಕೊಂಡಿದ್ದಾರೆ.

ಸೋಮವಾರ ಗಯಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಎಮ್ಮೆ ಸವಾರಿ ಮಾಡುವ ಮೂಲಕ ನಡೆಸಿದ್ದ ಅಭ್ಯರ್ಥಿಯೊಬ್ಬರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯಿದೆ ಉಲ್ಲಂಘನೆ ಹಾಗೂ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಗಾಗಿ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News