ಮುಖ್ಯ ಆರೋಪಿಯನ್ನು ಬೆಂಬಲಿಸಿದ್ದ ಶಾಸಕನಿಗೆ ಉ.ಪ್ರದೇಶ ಬಿಜೆಪಿಯಿಂದ ಶೋಕಾಸ್ ನೋಟಿಸ್

Update: 2020-10-20 14:57 GMT

ಲಕ್ನೋ,ಅ.20: ವ್ಯಕ್ತಿಯೋರ್ವನನ್ನು ಗುಂಡಿಟ್ಟು ಕೊಂದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಪಕ್ಷದ ಸ್ಥಳೀಯ ನಾಯಕನ್ನು ಬೆಂಬಲಿಸಿ ಹೇಳಿಕೆ ನೀಡಿರುವುದಕ್ಕಾಗಿ ಉತ್ತರ ಪ್ರದೇಶ ಬಿಜೆಪಿಯು ತನ್ನ ಶಾಸಕ ಸುರೇಂದ್ರ ಸಿಂಗ್ (ಬೈರಿಯಾ) ಅವರಿಗೆ ಶೋಕಾಸ್ ನೋಟಿಸನ್ನು ಹೊರಡಿಸಿದೆ. ನೋಟಿಸಿಗೆ ಉತ್ತರಿಸಲು ಒಂದು ವಾರದ ಗಡುವು ನೀಡಲಾಗಿದ್ದು,ಅನಗತ್ಯ ಹೇಳಿಕೆಗಳನ್ನು ನೀಡದಂತೆ ಅವರಿಗೆ ಸೂಚಿಸಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ ಸಿಂಗ್ ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬಲಿಯಾ ಜಿಲ್ಲೆಯ ದುರ್ಜನಪುರದಲ್ಲಿ ಅ.15ರಂದು ನ್ಯಾಯಬೆಲೆ ಅಂಗಡಿಗಳ ಹಂಚಿಕೆಯ ವಿಷಯದಲ್ಲಿ ವಿವಾದವುಂಟಾಗಿ ಸ್ಥಳೀಯ ಬಿಜೆಪಿ ಮುಖಂಡ ಧೀರೇಂದ್ರ ಪ್ರತಾಪ ಸಿಂಗ್ 46ರ ಹರೆಯದ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸುರೇಂದ್ರ ಸಿಂಗ್,ತಾನು ನ್ಯಾಯದ ಪರವಾಗಿದ್ದೇನೆ. ಅದು ಧೀರೇಂದ್ರ ಪ್ರತಾಪ್ ಪಾಲಿಗೆ ‘ಮಾಡು ಇಲ್ಲವೇ ಮಡಿ ’ಸ್ಥಿತಿಯಾಗಿದ್ದರಿಂದ ಅವರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರು ಎಂದು ಸಮರ್ಥಿಸಿಕೊಂಡಿದ್ದರು. ಆಡಳಿತವು ಪಕ್ಷಪಾತವನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದ ಅವರು,ಇನ್ನೊಂದು ಕಡೆಯವರ ದೂರನ್ನೂ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.

ಬಲಿಯಾ ಗುಂಡು ಹಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಧೀರೇಂದ್ರ ಪ್ರತಾಪ ಸೇರಿದಂತೆ 10 ಜನರನ್ನು ಪೊಲೀಸರು ಈವರೆಗೆ ಬಂಧಿಸಿದ್ದಾರೆ. ಸುಮಾರು 30 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು,ಹೆಚ್ಚಿನವರನ್ನು ಇನ್ನಷ್ಟೇ ಗುರುತಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News