ಕೃಷಿ ಕಾನೂನುಗಳ ಪರ ಅಥವಾ ವಿರೋಧವಿರುವ ಅರ್ಧಕ್ಕೂ ಹೆಚ್ಚಿನ ರೈತರಿಗೆ ಅವುಗಳ ಬಗ್ಗೆ ಮಾಹಿತಿಯಿಲ್ಲ: ಸಮೀಕ್ಷೆ

Update: 2020-10-20 15:09 GMT

ಹೊಸದಿಲ್ಲಿ,ಅ.20: ಕೇಂದ್ರ ಸರಕಾರದ ಇತ್ತೀಚಿನ ಮೂರು ಕೃಷಿ ಕಾನೂನುಗಳನ್ನು ಬೆಂಬಲಿಸುತ್ತಿರುವ ಅಥವಾ ವಿರೋಧಿಸುತ್ತಿರುವ ರೈತರ ಪೈಕಿ ಅರ್ಧಕ್ಕೂ ಹೆಚ್ಚಿನ ಜನರಿಗೆ ಅವುಗಳ ಬಗ್ಗೆ ಮಾಹಿತಿಯಿಲ್ಲ ಎಂದು ಗಾಂವ್ ಕನೆಕ್ಷನ್ ನಡೆಸಿರುವ ಸಮೀಕ್ಷೆಯು ಬೆಟ್ಟುಮಾಡಿದೆ.

 ‘ಗ್ರಾಮೀಣ ವರದಿ 2:ನೂತನ ಕೃಷಿಕಾನೂನುಗಳ ಬಗ್ಗೆ ಭಾರತೀಯ ರೈತರ ಗ್ರಹಿಕೆ’ ಶೀರ್ಷಿಕೆಯೊಂದಿಗೆ ಬಿಡುಗಡೆಗೊಂಡಿರುವ ಸಮೀಕ್ಷಾ ವರದಿಯು,ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ಶೇ.52ರಷ್ಟು ರೈತರ ಪೈಕಿ ಶೇ.36ರಷ್ಟು ಜನರಿಗೆ ಅವುಗಳ ವಿವರಗಳು ತಿಳಿದಿಲ್ಲ. ಇದೇ ರೀತಿ ಕೃಷಿ ಕಾನೂನುಗಳನ್ನು ಬೆಂಬಲಿಸುತ್ತಿರುವ ಶೇ.35ರಷ್ಟು ರೈತರ ಪೈಕಿ ಶೇ.18 ರಷ್ಟು ಜನರಿಗೂ ಅವುಗಳ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳಿದೆ.

ಅ.3ರಿಂದ ಅ.9ರವರೆಗೆ ದೇಶದ 16 ರಾಜ್ಯಗಳ 53 ಜಿಲ್ಲೆಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗಿದ್ದು,5,022 ರೈತರನ್ನು ಪ್ರಶ್ನಿಸಲಾಗಿತ್ತು ಎಂದು ಗಾಂವ್ ಕನೆಕ್ಷನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

 ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಂತೆ ತಮ್ಮನ್ನು ಬಲವಂತಗೊಳಿಸಲಾಗುತ್ತದೆ ಎನ್ನುವುದು ಈ ಕೃಷಿ ಕಾನೂನುಗಳ ಕುರಿತು ರೈತರಲ್ಲಿ ಉಂಟಾಗಿರುವ ಅತ್ಯಂತ ದೊಡ್ಡ ಭೀತಿಯಾಗಿದೆ. ಶೇ.57ರಷ್ಟು ರೈತರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರಕಾರವು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ಅಂತ್ಯಗೊಳಿಸಲಿದೆ ಎಂದು ಶೇ.33ರಷ್ಟು ರೈತರು ಆತಂಕವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿರುವ ವರದಿಯು,ಎಂಎಸ್‌ಪಿ ವ್ಯವಸ್ಥೆಯನ್ನು ಭಾರತದಲ್ಲಿ ಕಡ್ಡಾಯ ಕಾನೂನನ್ನಾಗಿಸಬೇಕು ಎಂದು ಶೇ.59ರಷ್ಟು ರೈತರು ಬಯಸಿದ್ದಾರೆ. ಮಧ್ಯಮ ಮತ್ತು ದೊಡ್ಡ ರೈತರಿಗೆ ಹೋಲಿಸಿದರೆ ಐದು ಎಕರೆಗೂ ಕಡಿಮೆ ಭೂಮಿಯನ್ನು ಹೊಂದಿರುವ ಹೆಚ್ಚಿನ ಸಣ್ಣ ಮತ್ತು ಅತಿಸಣ್ಣ ರೈತರು ಈ ಕೃಷಿ ಕಾನೂನುಗಳನ್ನು ಬೆಂಬಲಿಸುತ್ತಿದ್ದಾರೆ. ಆಸಕ್ತಿಯ ವಿಷಯವೆಂದರೆ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ಶೇ.52ರಷ್ಟು ರೈತರಲ್ಲಿ ಶೇ.44ರಷ್ಟು ಜನರು ಮೋದಿ ಸರಕಾರವು ರೈತಪರ ಎಂದು ಹೇಳಿದ್ದರೆ,ಶೇ.28ರಷ್ಟು ಜನರು ಅದು ರೈತವಿರೋಧಿ ಎಂದು ಅಭಿಪ್ರಾಯಿಸಿದ್ದಾರೆ ಎಂದು ಹೇಳಿದೆ.

ಸಮೀಕ್ಷೆಯ ಇನ್ನೊಂದು ಪ್ರಶ್ನೆಗೆ ಉತ್ತರಿಸಿರುವ ರೈತರ ಪೈಕಿ ಶೇ.35ರಷ್ಟು ಜನರು ಮೋದಿ ಸರಕಾರವು ಕೃಷಿಕರನ್ನು ಬೆಂಬಲಿಸಿದೆ ಎಂದು ಹೇಳಿದ್ದರೆ ಶೇ.20ರಷ್ಟು ಜನರು ಅದು ಖಾಸಗಿ ಕಂಪನಿಗಳ ಪರವಾಗಿದೆ ಎಂದಿದ್ದಾರೆ.

ಒಟ್ಟಾರೆಯಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.67ರಷ್ಟು ರೈತರಿಗೆ ನೂತನ ಕೃಷಿ ಕಾನೂನುಗಳ ಬಗ್ಗೆ ಅರಿವಿದೆ. ಇದೇ ವೇಳೆ ಶೇ.66ರಷ್ಟು ರೈತರಿಗೆ ಕೃಷಿ ಕಾನೂನುಗಳನ್ನು ವಿರೋಧಿಸಿ ದೇಶದ ಕೃಷಿಕರು ಇತ್ತೀಚಿಗೆ ನಡೆಸಿದ್ದ ಪ್ರತಿಭಟನೆಯ ಬಗ್ಗೆ ಗೊತ್ತಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News