ಹತ್ರಸ್ ಪ್ರಕರಣ: ಉತ್ತರಪ್ರದೇಶ ಪೊಲೀಸರು ಸಂಶಯಾಸ್ಪದವಾಗಿ ವರ್ತಿಸಿದ್ದಾರೆ; ಸತ್ಯಶೋಧನಾ ವರದಿ ಅಭಿಪ್ರಾಯ

Update: 2020-10-20 18:43 GMT

ಹತ್ರಸ್ (ಉತ್ತರಪ್ರದೇಶ), ಅ. 20: ಹಾಥರಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ದಲಿತ ಯುವತಿಯ ಕುಟುಂಬಕ್ಕೆ ಕಿರುಕುಳ ನೀಡುವ ಮೂಲಕ ಉತ್ತರಪ್ರದೇಶ ಪೊಲೀಸರು ಅನುಮಾನಾಸ್ಪದ ಹಾಗೂ ಕೆಟ್ಟ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರ ಸತ್ಯ ಶೋಧನಾ ಸಮಿತಿ ಮಂಗಳವಾರ ಆರೋಪಿಸಿದೆ. ‘‘ಫ್ಯಾಕ್ಟ್ ಫೈಂಡಿಂಗ್ ರಿಪೋರ್ಟ್ ಆನ್ ಬ್ರೂಚುವಲ್ ಗ್ಯಾಂಗ್ ರೇಪ್, ಅಸಾಲ್ಟ್ ಆ್ಯಂಡ್ ಮರ್ಡರ್ ಆಫ್ ಎ ದಲಿತ್ ಗರ್ಲ್ ಬೈ ಅಪ್ಪರ್ ಕಾಸ್ಟ್ ಠಾಕೂರ್ ಮೆನ್ ಇನ್ ಬೂಲ್‌ಗರ್ಹಿ ವಿಲೇಜ್, ಹಾಥರಸ್’’ ಶೀರ್ಷಿಕೆಯ ಸತ್ಯಶೋಧನಾ ವರದಿಯಲ್ಲಿ, ತಡವಾಗಿ ಪರೀಕ್ಷೆ ನಡೆಸುವುದರಿಂದ ಅತ್ಯಾಚಾರವನ್ನು ಸಾಬೀತುಪಡಿಸಲು ಅಸಾಧ್ಯವಾಗಿರುವುದರಿಂದ ಲೈಂಗಿಕ ದೌರ್ಜನ್ಯದ ವೈದ್ಯಕೀಯ ತನಿಖೆ ನಡೆಸಲು ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ ಮಾಡಲಾಗಿದೆ. ಶಾಶ್ವತವಾಗಿ ಪುರಾವೆಯನ್ನು ನಾಶಮಾಡುವುದು ಇದರ ಉದ್ದೇಶ ಎಂಬುದು ಸ್ಪಷ್ಟ ಎಂದು ಸಮಿತಿ ಹೇಳಿದೆ.

ಸೆಪ್ಟಂಬರ್ 14ರಂದು ಮೇಲ್ಜಾತಿಯ ನಾಲ್ವರು ಯುವಕರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಎರಡು ವಾರಗಳ ಬಳಿಕ ಸಾವನ್ನಪ್ಪಿದ ದಲಿತ ಯುವತಿಯ ತಂದೆಗೆ ಘಟನೆಯ ಬಳಿಕ ಜಿಲ್ಲಾಡಳಿತ ಒತ್ತಡ ಹೇರಿದೆ. ತನಿಖೆ ಹಾಗೂ ಚಿಕಿತ್ಸೆಯಿಂದ ತಾನು ಹಾಗೂ ಕುಟುಂಬ ಸಂತೃಪ್ತಿರಾಗಿರುವ ಬಗ್ಗೆ ಎಲ್ಲರಿಗೂ ತಿಳಿಸುವಂತೆ ಯುವತಿಯ ತಂದೆ ಮೇಲೆ ಜಿಲ್ಲಾಡಳಿತ ಒತ್ತಡ ಹೇರಿತ್ತು ಎಂದು ಕೂಡ ಸಮಿತಿ ಆರೋಪಿಸಿದೆ. ಇದು ಸತ್ಯವನ್ನು ಮುಚ್ಚಲು ಹಾಗೂ ಪ್ರಕರಣವನ್ನು ಶಾಶ್ವತವಾಗಿ ಕೊನೆಗೊಳಿಸಲು ರಾಜ್ಯ ಸರಕಾರ ನಡೆಸಿದ ಸಿದ್ಧತೆ ಎಂಬುದನ್ನು ತಿಳಿಸುತ್ತದೆ ಎಂದು ವರದಿ ಹೇಳಿದೆ.

‘ನರ್ಮದಾ ಬಚಾವೊ’ ಆಂದೋಲನದ ಮೇಧಾ ಪಾಟ್ಕರ್, ಮ್ಯಾಗ್ಸಸೆ ಪ್ರಶಸ್ತಿ ಪುರಷ್ಕೃತ ಸಂದೀಪ್ ಪಾಂಡೆ, ಆರ್‌ಟಿಐ ಕಾರ್ಯಕರ್ತೆ ಹಾಗೂ ಲೇಖಕಿ ಮಣಿಮಾಲಾ, ‘ದಿಲ್ಲಿ ಏಕತಾ’ ಗುಂಪಿನ ಇಬ್ಬರು ಸದಸ್ಯರು ಸೇರಿದಂತೆ 9 ಸದಸ್ಯರ ಸತ್ಯ ಶೋಧನಾ ಸಮಿತಿ ಮೃತಪಟ್ಟ ಯುವತಿಯ ಮನೆಗೆ ಅಕ್ಟೋಬರ್ 9ರಂದು ಭೇಟಿ ನೀಡಿತ್ತು. ಪ್ರಜ್ಞೆ ಮರುಕಳಿಸುವ ವರೆಗೆ ಯುವತಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಬಾರದು ಎಂದು ಕೆಲವು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಯುವತಿಯನ್ನು ಅನಗತ್ಯ ಆತುರ ತೋರಿಸಿ ಅಲಿಗಢದ ಜವಾಹರ್‌ಲಾಲ್ ನೆಹರೂ ವೈದ್ಯಕೀಯ ಕಾಲೇಜಿನಿಂದ ದಿಲ್ಲಿಗೆ ವರ್ಗಾಯಿಸಲಾಗಿದೆ ಎಂದು ವರದಿ ಪ್ರತಿಪಾದಿಸಿದೆ.

‘‘ಈ ಪರಿಸ್ಥಿತಿಯಲ್ಲಿ ಆಕೆಯನ್ನು ವರ್ಗಾಯಿಸುವುದು ಅಪಾಯಕಾರಿ ಎಂದು ಅರಿತ ಕುಟುಂಬ ವರ್ಗಾವಣೆಗೆ ಒಪ್ಪಿಗೆ ನೀಡಲು ನಿರಾಕರಿಸಿತ್ತು. ಆಕೆಗೆ ತೀವ್ರ ನೋವು ಇತ್ತು. ನರಕ್ಕಾದ ಘಾಸಿಯಿಂದ ಬೆನ್ನು ಹುರಿಯ ಮೇಲೆ ಪರಿಣಾಮ ಉಂಟಾಗಿರುವುದರಿಂದ ಕತ್ತು ಹಾಗೂ ಹಿಂಭಾಗದ ಚಲನೆ ಸಾಧ್ಯವಾಗುತ್ತಿರಲಿಲ್ಲ. ಆಕೆಯನ್ನು ದಿಲ್ಲಿ ಏಮ್ಸ್‌ಗೆ ವರ್ಗಾಯಿಸಲು ಜಿಲ್ಲಾಡಳಿತಕ್ಕೆ ಕುಟುಂಬ ಅನುಮತಿ ನೀಡಿಲ್ಲ ಎಂಬ ಆರೋಪ ಸುಳ್ಳು. ಇದು ಈಗ ಬಹಿರಂಗಗೊಂಡಿದೆ’’ ಎಂದು ವರದಿ ಹೇಳಿದೆ. ಆಕೆಯನ್ನು ವಾಸ್ತವವಾಗಿ ಏಮ್ಸ್‌ನ ಸನಿಹದಲ್ಲಿ ಇರುವ ಕೇಂದ್ರ ಸರಕಾರದ ಸ್ವಾಮ್ಯದಲ್ಲಿರುವ ಸಪ್ಧರಂಜಂಗ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಈ ಬಗ್ಗೆ ಆಕೆಯ ಕುಟುಂಬ ಪ್ರಶ್ನಿಸಿದಾಗ, ಎರಡೂ ಆಸ್ಪತ್ರೆ ಒಂದೇ ಎಂದು ಜಿಲ್ಲಾಡಳಿತ ಹೇಳಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News