30 ಲಕ್ಷಕ್ಕೂ ಅಧಿಕ ಸರಕಾರಿ ನೌಕರರಿಗೆ ಬೋನಸ್: ಕೇಂದ್ರ ಸಂಪುಟ ಅನುಮೋದನೆ

Update: 2020-10-21 14:23 GMT

ಹೊಸದಿಲ್ಲಿ: ಕೇಂದ್ರ ಸರಕಾರವು ತನ್ನ  ಸಿ ಹಾಗೂ ಡಿ ದರ್ಜೆಯ ನೌಕರರಿಗೆ ಕಳೆದ ಹಣಕಾಸು ವರ್ಷದ ಬೋನಸ್ ಅನ್ನು ಘೋಷಿಸಿದೆ. ಇದರಿಂದ 30 ಲಕ್ಷಕ್ಕೂ ಅಧಿಕ ನೌಕರರಿಗೆ 2019-20ನೇ ಸಾಲಿನ ಬೋನಸ್ ಸಿಗಲಿದೆ. ಈ ನಿರ್ಧಾರಕ್ಕೆ ಕೇಂದ್ರ ಸಂಪುಟದಿಂದ ಅನುಮೋದನೆ ಲಭಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ತಿಳಿಸಿದ್ದಾರೆ.

ಪ್ರತಿ ದಸರಾದ ವೇಳೆ ಕೇಂದ್ರ ಸರಕಾರ ತನ್ನ ನೌಕರರಿಗೆ ಬೋನಸ್ ನೀಡುವ ಕ್ರಮ ಅನುಸರಿಸುತ್ತಿದೆ. ಆದರೆ, ಈ ಬಾರಿ ಕೊರೋನ ವೈರಸ್ ತಂದಿಟ್ಟ ಸಂಕಷ್ಟದಲ್ಲಿ ಬೋನಸ್ ಎಂಬುದು ಸರಕಾರಿ ನೌಕರರಿಗೆ ಗಗನ ಕುಸುಮ ವಾಗಿತ್ತು. ಯಾರೂ ಕೂಡ ಬೋನಸ್ ನಿರೀಕ್ಷೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಈ ನಿರ್ಧಾರ ಹಲವರಿಗೆ ಆಶ್ಚರ್ಯ ಉಂಟು ಮಾಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ 2019-20ರ ಹಣಕಾಸು ವರ್ಷದಲ್ಲಿ ಬೋನಸ್ ನೀಡಲು ನಿರ್ಧರಿಸಿದ್ದು, 30 ಲಕ್ಷಕ್ಕೂ ಅಧಿಕ ನೌಕರರು ಇದರಿಂಧ ಲಾಭ ಪಡೆಯಲಿದ್ದು, ಬೋನಸ್ ಒಟ್ಟು ಮೊತ್ತ 3,737 ಕೋ.ರೂ. ಆಗಿದೆ.ಅ.26ರಂದು ವಿಜಯ ದಶಮಿ ಹಬ್ಬಕ್ಕಿಂತ ಮೊದಲು ಎಲ್ಲ ಅರ್ಹ ನೌಕರರ ಬ್ಯಾಂಕ್ ಖಾತೆಗೆ ಒಂದೇ ಕಂತಿನಲ್ಲಿ ನೇರವಾಗಿ ಹಣ ವರ್ಗಾವಣೆಯಾಗಲಿದೆ ಎಂದು ಜಾವಡೇಕರ್ ತಿಳಿಸಿದರು.

ಸಂಪುಟದ ನಿರ್ಧಾರಗಳನ್ನು ಪ್ರಕಟಿಸಿದ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು, ಉತ್ಪಾದನಾ ಮತ್ತು ಉತ್ಪಾದನೇತರ ಹೀಗೆ ಎರಡೂ ಬೋನಸ್‌ಗಳಿಗೆ ಸಂಪುಟವು ಅನುಮತಿ ನೀಡಿದೆ ಎಂದು ತಿಳಿಸಿದರು.

ರೈಲ್ವೆ, ಅಂಚೆ, ಭವಿಷ್ಯನಿಧಿ ಮತ್ತು ಇಎಸ್‌ಐಸಿಗಳಿಗೆ ಸೇರಿದ 17 ಲಕ್ಷ ನೌಕರರು ಉತ್ಪಾದನಾ ಬೋನಸ್ ಮತ್ತು ಇತರ 13 ಲಕ್ಷ ನೌಕರರು ಉತ್ಪಾದನೇತರ ಬೋನಸ್ ಪಡೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News