2019ರಲ್ಲಿ ತೀವ್ರ ವಾಯುಮಾಲಿನ್ಯದಿಂದ ಲಕ್ಷಕ್ಕೂ ಅಧಿಕ ಶಿಶುಗಳ ಸಾವು

Update: 2020-10-21 15:22 GMT

ಹೊಸದಿಲ್ಲಿ,ಅ.21: ಕಳೆದ ವರ್ಷ ಭಾರತದಲ್ಲಿ ತೀವ್ರ ವಾಯುಮಾಲಿನ್ಯಕ್ಕೆ ಒಡ್ಡಿಕೊಂಡಿದ್ದ ಸುಮಾರು 1,16,000 ಶಿಶುಗಳು ಒಂದು ತಿಂಗಳು ತುಂಬುವ ಮೊದಲೇ ಸಾವನ್ನಪ್ಪಿವೆ ಎಂದು ಸ್ಟೇಟ್ ಆಫ್ ಗ್ಲೋಬಲ್ ಏರ್ 2020 ವರದಿಯು ತಿಳಿಸಿದೆ.

 ಅಮೆರಿಕದ ಹೆಲ್ತ್ ಎಫೆಕ್ಟ್ಸ್ ಇನ್‌ಸ್ಟಿಟ್ಯೂಟ್ ಆ್ಯಂಡ್ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಬುಧವಾರ ಈ ವರದಿಯನ್ನು ಬಿಡುಗಡೆಗೊಳಿಸಿದ್ದು, ಇದು ನವಜಾತ ಶಿಶುಗಳ ಮೇಲೆ ತೀವ್ರ ವಾಯುಮಾಲಿನ್ಯದ ಪರಿಣಾಮಗಳನ್ನು ವಿಶ್ಲೇಷಿಸಿರುವ ಇಂತಹ ಮೊದಲ ವರದಿಯಾಗಿದೆ. ತೀವ್ರ ವಾಯು ಮಾಲಿನ್ಯದಿಂದ ಅತ್ಯಂತ ಹೆಚ್ಚಿನ ಶಿಶುಗಳು ಭಾರತದಲ್ಲಿ ಸಾವನ್ನಪ್ಪಿದ್ದು,ನೈಜೀರಿಯಾ (67,900), ಪಾಕಿಸ್ತಾನ (56,500),ಇಥಿಯೋಪಿಯಾ (22,900) ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (1,200) ನಂತರದ ಸ್ಥಾನಗಳಲ್ಲಿವೆ ಎಂದು ವರದಿಯು ತಿಳಿಸಿದೆ.

ತಾಯಂದಿರು ಗರ್ಭಾವಸ್ಥೆಯಲ್ಲಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು 2,500 ಗ್ರಾಮ್‌ಗೂ ಕಡಿಮೆ ತೂಕದ ಮಕ್ಕಳ ಜನನ ಅಥವಾ ಅವಧಿಗೆ ಮುನ್ನವೇ ಜನನದೊಂದಿಗೆ ತಳುಕು ಹಾಕಿಕೊಂಡಿದೆ ಎನ್ನುವುದನ್ನು ತೋರಿಸಿರುವ ಸಂಶೋಧನೆಗಳನ್ನು ವರದಿಯು ಆಧರಿಸಿದೆ. ಕಡಿಮೆ ತೂಕ ಮತ್ತು 37 ವಾರಗಳು ತುಂಬುವ ಮುನ್ನವೇ ಹೆರಿಗೆ ಇವು ಶ್ವಾಸನಾಳ ಸೋಂಕುಗಳು,ಅತಿಸಾರ,ಇತರ ಗಂಭೀರ ಸೋಂಕುಗಳು ಹಾಗೂ ಮಾರಣಾಂತಿಕವಾಗಬಲ್ಲ ಮಿದುಳಿಗೆ ಹಾನಿ,ರಕ್ತ ಕಾಯಿಲೆಗಳು ಮತ್ತು ಜಾಂಡಿಸ್‌ನಂತಹ ಅಪಾಯಗಳೊಂದಿಗೆ ಗುರುತಿಸಿಕೊಂಡಿವೆ.

  ಇದಕ್ಕೆ ಜೈವಿಕ ಕಾರಣಗಳು ಪೂರ್ಣವಾಗಿ ತಿಳಿದು ಬಂದಿಲ್ಲವಾದರೂ ಧೂಮ್ರಪಾನದಂತೆ ವಾಯುಮಾಲಿನ್ಯವೂ ಗರ್ಭಿಣಿ,ಆಕೆಯ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣ ಅಥವಾ ಇಬ್ಬರ ಮೇಲೂ ಹಾನಿಕಾರಕ ಪರಿಣಾಮಗಳನ್ನುಂಟು ಮಾಡುತ್ತದೆ ಎಂದು ಪರಿಗಣಿಸಲಾಗಿದೆ. ಕಡಿಮೆ ತೂಕದ ಶಿಶುಗಳ ಜನನ ಮತ್ತು ಅವಧಿಪೂರ್ವ ಹೆರಿಗೆಗಳಿಗೆ ಧೂಮ್ರಪಾನ ಕಾರಣ ಎನ್ನುವುದು ಈಗಾಗಲೇ ತಿಳಿದಿರುವ ವಿಷಯವಾಗಿದೆ ಎಂದು ವರದಿಯು ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಗೊಳಿಸಿರುವ ಮಾನದಂಡಗಳಿಗೆ ಅನುಗುಣವಾಗಿ ವಾಯು ಗುಣಮಟ್ಟವನ್ನು ಕಾಯ್ದುಕೊಂಡರೆ ವರ್ಷಕ್ಕೆ ಸುಮಾರು 1,16,000 ಶಿಶುಗಳ ಸಾವನ್ನು ತಡೆಯಬಹುದು ಎಂದು ಹೇಳಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಸೆಂಟರ್ ಫಾರ್ ಅಡ್ವಾನ್ಸಡ್ ರೀಸರ್ಚ್ ಆನ್ ಏರ್ ಕ್ವಾಲಿಟಿ,ಕ್ಲೈಮೇಟ್ ಆ್ಯಂಡ್ ಹೆಲ್ತ್‌ನ ನಿರ್ದೇಶಕಿ ಕಲ್ಪನಾ ಬಾಲಕೃಷ್ಣನ್ ಅವರು,ಧೂಮ್ರಪಾನ,ರಕ್ತಹೀನತೆ ಮತ್ತು ತಾಯಿಯ ಆರೋಗ್ಯ ಇವೆಲ್ಲ ವ್ಯಕ್ತಿಗತ ಅಪಾಯಗಳಾಗಿದ್ದು ಇವುಗಳನ್ನು ವ್ಯಕ್ತಿಗತ ಮಟ್ಟದಲ್ಲಿ ನಿಭಾಯಿಸಬಹುದಾಗಿದೆ. ಆದರೆ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅದಕ್ಕೆ ಒಡ್ಡಿಕೊಳ್ಳುವ ಮೂಲಕ ಭಾರೀ ಸಂಖ್ಯೆಯ ಜನರು ಅಪಾಯದಲ್ಲಿದ್ದಾರೆ ಎಂದು ತಿಳಿಸಿದರು.

ಮನೆಯೊಳಗಿನ ಮತ್ತು ಪರಿಸರದಲ್ಲಿನ ವಾಯುಮಾಲಿನ್ಯಕ್ಕೆ ತೆರೆದುಕೊಂಡಿರುವುದು ಗರ್ಭದಲ್ಲಿರುವ ಭ್ರೂಣದ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತದೆ ಎನ್ನುವುದನ್ನು ಐಸಿಎಂಆರ್ ಸೇರಿದಂತೆ 70ಕ್ಕೂ ಅಧಿಕ ಅಧ್ಯಯನಗಳು ತೋರಿಸಿವೆ ಎಂದ ಅವರು,ಗರ್ಭಿಣಿಯರ ಮೇಲೆ ಮತ್ತು ನವಜಾತ ಶಿಶುಗಳ ಆರೋಗ್ಯದ ಮೇಲೆ ವಾಯುಮಾಲಿನ್ಯದ ದುಷ್ಪರಿಣಾಮಗಳನ್ನು ತಡೆಯುವುದು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಮುಖ್ಯವಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News