ಸಿರಾಜ್ ನೂತನ ದಾಖಲೆ, ಕೆಕೆಆರ್ ವಿರುದ್ಧ ಆರ್ ಸಿಬಿಗೆ ಸುಲಭ ಜಯ

Update: 2020-10-21 17:28 GMT

ಅಬುಧಾಬಿ: ವೇಗದ ಬೌಲರ್ ಮುಹಮ್ಮದ್ ಸಿರಾಜ್ (3-8)ಹಾಗೂ ಸ್ಪಿನ್ನರ್ ಯಜುವೇಂದ್ರ ಚಹಾಲ್(2-15) ಅಮೋಘ ಬೌಲಿಂಗ್ ಗೆ ಕಂಗಾಲಾದ ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬುಧವಾರ ನಡೆದ ಐಪಿಎಲ್ ನ 39ನೇ ಪಂದ್ಯದಲ್ಲಿ 8 ವಿಕೆಟ್ ಗಳ ಅಂತರದಿಂದ ಸೋಲುಂಡಿದೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 84 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲ್ಲಲು ಸುಲಭ ಸವಾಲು ಪಡೆದ ಆರ್ ಸಿಬಿ 13.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತು. ಇನ್ನೂ 39 ಎಸೆತಗಳು ಬಾಕಿ ಇರುವಾಗಲೇ ಜಯ ಸಾಧಿಸಿರುವ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ಮೊದಲ ವಿಕೆಟ್ ಜೊತೆಯಾಟದಲ್ಲಿ 46 ರನ್ ಗಳಿಸಿದ ದೇವದತ್ತ ಪಡಿಕ್ಕಲ್(25) ಹಾಗೂ ಆ್ಯರೊನ್ ಫಿಂಚ್ (16) ಉತ್ತಮ ಆರಂಭ ಒದಗಿಸಿದರು. ಈ ಇಬ್ಬರು ಔಟಾದ ಬಳಿಕ ಗುರುಕೀರತ್ ಸಿಂಗ್ (ಔಟಾಗದೆ 21) ಹಾಗೂ ನಾಯಕ ವಿರಾಟ್ ಕೊಹ್ಲಿ(18) ತಂಢವನ್ನು ಗೆಲುವಿನ ದಡ ಸೇರಿಸಿದರು.

ಸಿರಾಜ್ ಹೊಸ ದಾಖಲೆ: ಕೆಕೆಆರ್ ಐಪಿಎಲ್ ಟಿ-20 ಇನಿಂಗ್ಸ್ ನಲ್ಲಿ ಆಲೌಟ್ ಆಗದೆ ಕನಿಷ್ಠ ಸ್ಕೋರ್ ಗಳಿಸಿದ ಮೊದಲ ತಂಡ  ಎಂಬ ಅಪಕೀರ್ತಿಗೆ ಪಾತ್ರವಾಯಿತು. 2011ರಲ್ಲಿ ರಾಜಸ್ಥಾನ ವಿರುದ್ದ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಗೆ 94 ರನ್ ಗಳಿಸಿತ್ತು.  ಕೆಕೆಆರ್ ಇನಿಂಗ್ಸ್ ನಲ್ಲಿ 4 ಮೇಡನ್ ಓವರ್ ದಾಖಲಾಗಿರುವುದು ಒಂದು ದಾಖಲೆಯಾಗಿದ್ದು, ಸಿರಾಜ್ ಐಪಿಎಲ್ ನಲ್ಲಿ 2 ಮೇಡನ್ ಓವರ್ ಎಸೆದ ಮೊದಲ ಬೌಲರ್ ಎನಿಸಿಕೊಳ್ಳುವ ಮೂಲಕ  ಹೊಸ ದಾಖಲೆ ನಿರ್ಮಿಸಿದರು.

ಸಿರಾಜ್ ಮೊದಲ ಎರಡು ಓವರ್ ನಲ್ಲಿ ರನ್ ನೀಡದೇ ಮೂರು ವಿಕೆಟ್ ಗಳನ್ನುಉರುಳಿಸಿದರು. ರಾಹುಲ್ ತ್ರಿಪಾಠಿ, ನಿತಿಶ್ ರಾಣಾ ಹಾಗೂ ಟಾಮ್ ಬಂಟನ್ ವಿಕೆಟ್ ಕಬಳಿಸಿದರು.

ಆರ್ಸಿಬಿ ಬೌಲರ್ ಗಳು 4 ಮೇಡನ್ ಎಸೆದಿದ್ದು, ಸಿರಾಜ್ 2, ಕ್ರಿಸ್ ಮೊರಿಸ್ ಹಾಗೂ ಸುಂದರ್ ತಲಾ ಒಂದು ಮೇಡನ್ ಎಸೆದರು. ಇದು ಐಪಿಎಲ್ ಇತಿಹಾಸದಲ್ಲಿ ಮೊದಲ ಸಾಧನೆಯಾಗಿದೆ. ಈ ಹಿಂದೆ ಇನಿಂಗ್ಸ್ ವೊಂದರಲ್ಲಿ 2 ಕ್ಕಿಂತ ಹೆಚ್ಚು ಮೇಡನ್ ಎಸಯಲಾಗಿಲ್ಲ.

ಕೆಕೆಆರ್ ಪರವಾಗಿ ನಾಯಕ ಇಯಾನ್ ಮೋರ್ಗನ್ ಗರಿಷ್ಠ ವೈಯಕ್ತಿಕ ಸ್ಕೋರ್ (30) ಗಳಿಸಿದರು. ಆರಂಭಿಕ ಆಟಗಾರರಾದ ಶುಭಂ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಕೇವಲ ಒಂದು ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News