ಫಡ್ನವಿಸ್ ನನ್ನ ವಿರುದ್ಧ ಕಿರುಕುಳ ಕೇಸ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದರು: ಬಿಜೆಪಿ ತೊರೆದ ಏಕನಾಥ್ ಆರೋಪ

Update: 2020-10-22 06:13 GMT

ಮುಂಬೈ: ಬಿಜೆಪಿ ತ್ಯಜಿಸಿರುವ ಹಿರಿಯ ನಾಯಕ ಏಕನಾಥ್ ಖಡ್ಸೆ ಅವರು ದೇವೇಂದ್ರ ಫಡ್ನವಿಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಅವರು ನನ್ನ ವಿರುದ್ಧ ಸುಳ್ಳು ಕಿರುಕುಳ ಕೇಸ್ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು ಎಂದು ಆರೋಪಿಸಿದ್ದಾರೆ.

ಬಿಜೆಪಿಯಲ್ಲಿ ಯಾವ ರೀತಿಯ ಸಮಸ್ಯೆ ಎದುರಿಸಿದ್ದೇನೆ ಎಂಬ ಕುರಿತು ಮಾತನಾಡಿದ ಖಡ್ಸೆ, ಮಾಜಿ ಸಿಎಂ(ದೇವೇಂದ್ರ ಫಡ್ನವಿಸ್) ಮಹಿಳೆಯೊಬ್ಬರು ಮಾಡಿದ್ದ ಸುಳ್ಳು ಕಿರುಕುಳ ಆರೋಪಕ್ಕೆ ನನ್ನ ಮೇಲೆ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಈ ಪ್ರಕರಣವನ್ನು ಬಳಿಕ ಹಿಂಪಡೆಯಲಾಗಿತ್ತು. ನನ್ನ ವಿರುದ್ಧ ಭ್ರಷ್ಟಾಚಾರದ ತನಿಖೆಯನ್ನು ಆರಂಭಿಸಲಾಗಿದ್ದು, ಅದರಲ್ಲಿ ನಾನು ದೋಷಮುಕ್ತನಾಗಿದ್ದೇನೆ ಎಂದು ಖಡ್ಸೆ ಹೇಳಿದ್ದಾರೆ.

2016ರಲ್ಲಿ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಖಡ್ಸೆ ತನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರ ಬಿಜೆಪಿಯಿಂದ ದೂರವೇ ಉಳಿದಿದ್ದರು. ಖಡ್ಸೆ ಶುಕ್ರವಾರ ಎನ್‌ಸಿಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಸಚಿವ ಜಯಂತ್ ಪಾಟೀಲ್ ಬುಧವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News