ಭಾರತವನ್ನು ನೋಡಿ, ಅಲ್ಲಿ ಗಾಳಿ ಮಲಿನವಾಗಿದೆ ಎಂದ ಟ್ರಂಪ್

Update: 2020-10-23 06:55 GMT

ವಾಶಿಂಗ್ಟನ್: ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಜೋ ಬೈಡನ್ ಅವರೊಂದಿಗೆ ಎರಡನೇ ಹಾಗೂ ಅಂತಿಮ ಸುತ್ತಿನ ಚರ್ಚೆಯಲ್ಲಿ ಭಾಗವಹಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹವಾಮಾನ ಬದಲಾವಣೆಯ ವಿಚಾರದಲ್ಲಿ ಅಮೆರಿಕವನ್ನು ಭಾರತ, ಚೀನಾ ಹಾಗೂ ರಶ್ಯದೊಂದಿಗೆ ಹೋಲಿಸಿದರು. ಈ ಮೂರು ದೇಶಗಳು ಹೊಲಸು ಹಾಗೂ ಈ ದೇಶಗಳು ತಮ್ಮ ವಾಯು ನೈರ್ಮಲ್ಯದ ಕುರಿತು ಹೆಚ್ಚು ಕಾಳಜಿವಹಿಸುವುದಿಲ್ಲ. ಆದರೆ ಅಮೆರಿಕ ಈ ವಿಚಾರದಲ್ಲಿ ಹೆಚ್ಚು ಕಾಳಜಿವಹಿಸುತ್ತಿದೆ ಎಂದರು.

 "ಚೀನಾವನ್ನು ನೋಡಿ, ಅಲ್ಲಿಯ ಗಾಳಿಯು ಮಲಿನವಾಗಿದೆ. ರಶ್ಯವನ್ನು ನೋಡಿ, ಭಾರತವನ್ನು ನೋಡಿ ಅಲ್ಲೆಲ್ಲ ಗಾಳಿ ಮಲಿನವಾಗಿದೆ. 35 ವರ್ಷಗಳಲ್ಲಿ ಅಮೆರಿಕವು ಅತ್ಯುತ್ತಮ ಇಂಗಾಲದ ಹೊರಸೂಸುವಿಕೆಯನ್ನು ಹೊಂದಿದೆ. ನಮ್ಮಲ್ಲಿ ಸ್ವಚ್ಛವಾದ ಗಾಳಿ, ಸ್ವಚ್ಛವಾದ ನೀರು ಹಾಗೂ ಅತ್ಯುತ್ತಮ ಇಂಗಾಲದ ಹೊರಸೂಸುವಿಕೆ ಇದೆ'' ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಈ ಹಿಂದೆ ಕೂಡ ಸೆಪ್ಟಂಬರ್ 29ರಂದು ನಡೆದ ಮೊದಲ ಚರ್ಚೆಯ ವೇಳೆ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಜಾಗತಿಕ ಮಾಲಿನ್ಯಕ್ಕೆ ಭಾರತ, ಚೀನಾ ಹಾಗೂ ರಶ್ಯ ದೇಶಗಳು ಹೆಚ್ಚು ಕೊಡುಗೆ ನೀಡುತ್ತಿವೆ ಎಂದು ಟ್ರಂಪ್ ಆರೋಪಿಸಿದ್ದರು.

ಚೀನಾ ಗಾಳಿಯಲ್ಲಿ ನಿಜವಾದ ಕೊಳೆಯನ್ನು ಕಳುಹಿಸುತ್ತದೆ. ರಶ್ಯ ಹೀಗೆಯೇ ಮಾಡುತ್ತದೆ, ಭಾರತ ಕೂಡ ಹೀಗೆಯೇ ಮಾಡುತ್ತದೆ-ಇವೆಲ್ಲರೂ ಹೀಗೆ ಮಾಡುತ್ತಾರೆ ಎಂದು ಟ್ರಂಪ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News