ಅಝರ್ ಅಲಿಗೆ ಟೆಸ್ಟ್ ತಂಡದ ನಾಯಕತ್ವ ಕೈ ತಪ್ಪುವ ಸಾಧ್ಯತೆ

Update: 2020-10-23 18:42 GMT

ಕರಾಚಿ, ಅ.23: ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಳ್ಳಲಿರುವ ಪಾಕಿಸ್ತಾನದ ಟೆಸ್ಟ್ ತಂಡಕ್ಕೆ ಹೊಸ ನಾಯಕನ ನೇಮಕವಾಗಲಿದೆ. ಈಗಿನ ನಾಯಕ ಅಝರ್ ಅಲಿ ನಾಯಕತ್ವ ಕಳೆದುಕೊಳ್ಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 ಪಾಕಿಸ್ತಾನದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಮ್ ಅಥವಾ ಮುಹಮ್ಮದ್ ರಿಝ್ವಿನ್ ಅವರನ್ನು ಟೆಸ್ಟ್ ತಂಡದ ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

 81 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಅಝರ್ ಕ್ರಿಕೆಟ್ ಆಯ್ಕೆ ಸಮಿತಿಯ ಪ್ರಭಾವಿ ಸದಸ್ಯರ ಒಲವು ಕಳೆದುಕೊಂಡಿದ್ದಾರೆ ಎನ್ನಲಾಗಿದೆ, ಆದರೆ ಪಿಸಿಬಿ ಅಧ್ಯಕ್ಷ ಮತ್ತು ಸಿಇಒ ಕೂಡ ಅವರನ್ನು ನಾಯಕರಾಗಿ ಉಳಿಸಿಕೊಳ್ಳುವ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗಿದೆ.

ಎಲ್ಲಾ 3 ಸ್ವರೂಪಗಳ ತಂಡಗಳಿಗೆ ನಾಯಕನಾಗಿದ್ದ ಸರ್ಫರಾಜ್ ಅಹ್ಮದ್ ಅವರನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ವಜಾಗೊಳಿಸಿದ ನಂತರ ಅಝರ್ ಅವರನ್ನು ಟೆಸ್ಟ್ ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿತ್ತು.

 ಅಝರ್ ಅಲಿ ನಾಯಕರಾಗಿ 1 ವರ್ಷದ ಅವಧಿಯಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾ ಮತ್ತು ಬಾಂಗ್ಲಾ ದೇಶದ ವಿರುದ್ಧ ತವರಿನ ಟೆಸ್ಟ್ ಸರಣಿಯಲ್ಲಿ ಗೆಲುವು ದಾಖಲಿಸಿತ್ತು. ಆದರೆ ಆಸ್ಟ್ರೇಲಿಯದಲ್ಲಿ ಪಾಕಿಸ್ತಾನ ತಂಡವು ಎರಡು ಪಂದ್ಯಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್ ಪ್ರವಾಸ ಸರಣಿಯಲ್ಲಿ ಪಾಕ್ ತಂಡವು 3 ಪಂದ್ಯಗಳ ಟೆಸ್ಟ್ ಸರಣಿಯನ್ನು 0-1 ಅಂತರದಿಂದ ಕಳೆದುಕೊಂಡಿತ್ತು.

  ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮುಹಮ್ಮದ್ ರಿಝ್ವ್ವ್‌ನ್ ಇದೀಗ ಜನಪ್ರಿ ಯತೆಯ ಅಲೆಯ ಮೇಲೆ ಸವಾರಿ ಮಾಡುತ್ತಿದ್ದಾರೆ. ಇತ್ತೀಚೆಗೆ ರಿಝ್ವ್ವಿನ್ ನೇತೃತ್ವದ ತಂಡ ರಾಷ್ಟ್ರೀಯ ಟ್ವೆಂಟಿ-20 ಚಾಂಪಿಯನ್‌ಶಿಪ್ ಜಯಿಸಿತ್ತು. ನ. 11ರಂದು ನಡೆಯುವ ಸಭೆಯಲ್ಲಿ ಅಝರ್ ಅವರ ಭವಿಷ್ಯವನ್ನು ನಿರ್ಧರಿಸಲಾಗುವುದು ಎಂದು ಪಿಸಿಬಿ ಸಿಇಒ ವಸೀಮ್ ಖಾನ್ ತಿಳಿಸಿದ್ದಾರೆ.

 ಅಝರ್ ಅಲಿ ಕೇವಲ ಒಂದು ವರ್ಷದೊಳಗೆ ನಾಯಕತ್ವವನ್ನು ಕಳೆದುಕೊಂಡಿರುವುದು ಇದು ಮೊದಲಲ್ಲ. 2015ರ ವಿಶ್ವಕಪ್ ನಂತರ ಸುಮಾರು 2 ವರ್ಷಗಳ ಕಾಲ ಅಝರ್ ಏಕದಿನ ತಂಡದ ನಾಯಕರಾಗಿದ್ದರು. ಬಳಿಕ ಸರ್ಫರಾಝ್ 3 ಸ್ವರೂಪದ ತಂಡಗಳಿಗೂ ನಾಯಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News