ಆದಿವಾಸಿಗಳ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಬಿಹಾರ ಚುನಾವಣೆ ಬಹಿಷ್ಕರಿಸಲಿರುವ 108 ಗ್ರಾಮಗಳ ಜನರು

Update: 2020-10-24 06:23 GMT
Photo: sabrangindia.in

ಪಾಟ್ನಾ: ಕಳೆದ ತಿಂಗಳು ಬಿಹಾರದ ಕೈಮೂರ್ ಪ್ರಾಂತ್ಯದಲ್ಲಿ ಆದಿವಾಸಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಈ ಪ್ರಾಂತ್ಯದ 108 ಗ್ರಾಮಗಳ ನಿವಾಸಿಗಳು ಸದ್ಯದಲ್ಲಿಯೇ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಆ ನಿರ್ದಿಷ್ಟ ಪ್ರದೇಶವನ್ನು ಹುಲಿ ಸಂರಕ್ಷಿತ ವಲಯ ಎಂದು ಘೋಷಿಸಿರುವುದರ ವಿರುದ್ಧ ಹಾಗೂ ಇನ್ನಿತರ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಆದಿವಾಸಿಗಳು ಕೈಮೂರ್ ಮುಕ್ತಿ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟಿಸುತ್ತಿದ್ದಾಗ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ 25 ಮಂದಿ ಹೋರಾಟಗಾರರನ್ನು ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸುಪ್ರೀಂ ಕೋರ್ಟ್ ಒತ್ತುವರಿಗೆ ತಡೆ ಹೇರಿದ್ದರೂ ಅರಣ್ಯ ಇಲಾಖೆ ಬಲವಂತದ ಒತ್ತುವರಿ ಕಾರ್ಯಾಚರಣೆ ಹಾಗೂ ಬೆಳೆಗಳ ನಾಶಗೈದಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಕೈಮೂರ್ ಅನ್ನು ಶೆಡ್ಯೂಲ್ಡ್ ಪ್ರದೇಶ ಎಂದು ಘೋಷಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಜತೆಗೆ ಗ್ರಾಮ ಸಭಾಗಳು ಹಾಗೂ ಆದಿವಾಸಿಗಳ  ಒಪ್ಪಿಗೆ ಪಡೆದೇ ಹುಲಿ ಸಂರಕ್ಷಿತ ಪ್ರದೇಶವನ್ನು ಗುರುತಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.

ಕೈಮೂರ್‍ನಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ ಕುರಿತಂತೆ ನಾಲ್ಕು ಮಂದಿ ಸದಸ್ಯರು ಸಿದ್ಧಪಡಿಸಿದ ವರದಿಯನ್ನು ಸಿಪಿಎಂ ಪಾಲಿಟ್ ಬ್ಯುರೋ ಸದಸ್ಯೆ ಬೃಂದಾ ಕಾರಟ್ ಶುಕ್ರವಾರ ದಿಲ್ಲಿಯಲ್ಲಿ ಬಿಡುಗಡೆಗೊಳಿಸಿ, ಬಿಹಾರ ಸರಕಾರ ಅರಣ್ಯ ಹಕ್ಕುಗಳ ಕಾಯಿದೆ ಜಾರಿಗೊಳಿಸಿಲ್ಲದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಈ ವರದಿಯ ಪ್ರಕಾರ ಸೆಪ್ಟೆಂಬರ್ 10ರಂದು 108 ಗ್ರಾಮಗಳ ಆದಿವಾಸಿಗಳು ಅಧೌರ ಅರಣ್ಯ ಇಲಾಖೆಯ ಕಚೇರಿಯೆದುರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಪೊಲೀಸರು  ಗುಂಡು ಹಾರಿಸಿ, ಲಾಠಿ ಚಾರ್ಜ್ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದರಲ್ಲದೆ ನಂತರ ಅಕ್ಟೋಬರ್ 6ರಂದು ಅವರನ್ನು ಬಿಡುಗಡೆಗೊಳಿಸಿದ್ದರು .  ಪೊಲೀಸರ ಗುಂಡು ಪ್ರಭು ಎಂಬ ಹೆಸರಿನ ಆದಿವಾಸಿಯ ಕಿವಿಗೆ ತಾಗಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆಂದೂ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News