ನಿಮ್ಮಲ್ಲಿ ಈಡಿ ಇದ್ದರೆ, ನನ್ನಲ್ಲಿ ಸಿಡಿ ಇದೆ: ಬಿಜೆಪಿ ತೊರೆದ ಏಕನಾಥ್ ಖಡ್ಸೆ

Update: 2020-10-24 11:13 GMT
ಏಕನಾಥ್ ಖಡ್ಸೆ

ಮುಂಬೈ: "ನಿಮ್ಮಲ್ಲಿ ಈಡಿ ಇದ್ದರೆ, ನಾನು ನಿಮಗೆ ಸಿಡಿ ತೋರಿಸುತ್ತೇನೆ...'' ಎಂದು ಬಿಜೆಪಿ ತೊರೆದು ಶುಕ್ರವಾರ ಎನ್‍ಸಿಪಿ ಸೇರಿದ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಏಕನಾಥ್ ಜಿ ಖಡ್ಸೆ ಹೇಳಿದ್ದಾರೆ.

ಬಿಜೆಪಿ ತನ್ನ ವಿರೋಧಿಗಳನ್ನು ಮಟ್ಟ ಹಾಕಲು ತನಿಖಾ ಏಜನ್ಸಿಗಳಾದ ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಐಟಿ ಇಲಾಖೆಗಳನ್ನು ಬಳಸುತ್ತದೆ ಎಂಬ ದೂರುಗಳನ್ನು ಅವರು ಪರೋಕ್ಷವಾಗಿ ಪ್ರತಿಧ್ವನಿಸಿದರು.

ಕಳೆದ ನಾಲ್ಕು ವರ್ಷ ತಾವು ಪಕ್ಷದಲ್ಲಿ ಎದುರಿಸಿದ ಅವಮಾನ ಹಾಗೂ ಹಿಂಸೆಯನ್ನು ನೆನಪಿಸಿದ ಖಡ್ಸೆ ಇದಕ್ಕೆಲ್ಲಾ ಈ ಹಿಂದೆ ಹಲವು ಬಾರಿ  ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ದೂರಿದ್ದನ್ನು ಇಲ್ಲಿ ಸ್ಮರಿಸಬಹುದು.

"ಕೊನೆಯ ಕ್ಷಣದ ತನಕ ಹಿರಿಯ ಬಿಜೆಪಿ ನಾಯಕರು ನನ್ನ ಮನಸ್ಸು ಬದಲಾಯಿಸಲು ಯತ್ನಿಸಿದರು, ಕೇಂದ್ರದಲ್ಲಿ ಕೆಲ ಇತರರು ಈಗಿನ ಸನ್ನಿವೇಶದಲ್ಲಿ ಬಿಜೆಪಿಯಲ್ಲಿ ನನಗೆ ಭವಿಷ್ಯವಿಲ್ಲವೆಂದು ಹೇಳಿ ಪಕ್ಷ ತೊರೆದು ಎನ್‍ಸಿಪಿ ಸೇರಲು ಸೂಚಿಸಿದರು,'' ಎಂದು ಖಡ್ಸೆ ಹೇಳಿದರು.

ಉತ್ತರ ಮಹಾರಾಷ್ಟ್ರದಲ್ಲಿ 17 ಸಂಸದರ ಜಯಕ್ಕೆ ತಾವು ಶ್ರಮಿಸಿದ್ದಾಗಿ ತಿಳಿಸಿದ ಅವರು "ಯಾರು ಎಷ್ಟು ಭೂಕಬಳಿಕೆ ಮಾಡಿದ್ದಾರೆ'' ಮತ್ತಿತರ ಹಗರಣಗಳನ್ನು ಬಹಿರಂಗಗೊಳಿಸುವ ಬೆದರಿಕೆಯನ್ನೂ ಒಡ್ಡಿದರು.

ಎನ್‍ಸಿಪಿ ರಾಜ್ಯಾಧ್ಯಕ್ಷ ಹಾಗೂ ಸಚಿವ ಜಯಂತ್ ಪಾಟೀಲ್ ಅವರು ಖಡ್ಸೆ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತಾ `ಟೈಗರ್ ಝಿಂದಾ ಹೈ' ಹಾಗೂ `ಪಿಕ್ಚರ್ ಅಭಿ ಬಾಕಿ ಹೈ' ಎಂಬ ಸಂದೇಶವನ್ನು ಖಡ್ಸೆ ಅವರ ಎನ್‍ಸಿಪಿ ಸೇರ್ಪಡೆ ಬಿಜೆಪಿಗೆ ರವಾನಿಸುತ್ತದೆ ಎಂದರಲ್ಲದೆ ಖಡ್ಸೆ ನಂತರ ಇನ್ನೂ ಹಲವರು ಪಕ್ಷದಿಂದ ಹೊರಬರಲಿದ್ದಾರೆಂಬ ಸುಳಿವನ್ನೂ ನೀಡಿದರು.

ಖಡ್ಸೆ ಅವರನ್ನು ಸ್ವಾಗತಿಸಿ ಮಾತನಾಡಿದ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ``ಇಂದು ಪಕ್ಷದ ಪಾಲಿಗೆ ಖುಷಿಯ ದಿನ'' ಎಂದು ರಾಜ್ಯ ಬಿಜೆಪಿಯನ್ನು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಟ್ಟಿ ಬೆಳೆಸಿದ ನಾಯನ ಎನ್‍ಸಿಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News