ಮಧುರೈ ಪಟಾಕಿ ಕಾರ್ಖಾನೆ ಸ್ಫೋಟ: ಮೃತರ ಸಂಖ್ಯೆ ಏಳಕ್ಕೇರಿಕೆ

Update: 2020-10-24 14:05 GMT
ಸಾಂದರ್ಭಿಕ ಚಿತ್ರ

ಮಧುರೈ (ತ.ನಾ),ಅ.24: ಇಲ್ಲಿಯ ಪಟಾಕಿ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಸಂಭವಿಸಿದ್ದ ಭೀಕರ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯರಿಬ್ಬರು ಶನಿವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದು,ಇದರೊಂದಿಗೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೇರಿದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆಯ ಮ್ಯಾನೇಜರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ ಏಳೂ ಮೃತರು ಮಹಿಳೆಯರಾಗಿದ್ದಾರೆ.

 ಕಾರ್ಮಿಕರು ಪಟಾಕಿ ತಯಾರಿಕೆಗಾಗಿ ಕಚ್ಚಾ ಸ್ಫೋಟಕಗಳನ್ನು ಬಳಸುತ್ತಿದ್ದಾಗ ಸ್ಫೋಟ ಸಂಭವಿಸಿತ್ತು. ಐವರು ಮಹಿಳೆಯರು ಸ್ಥಳದಲ್ಲಿಯೇ ಸುಟ್ಟು ಕರಕಲಾಗಿದ್ದರೆ ಇತರ ಐವರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದವು.

ಸ್ಫೋಟದ ಕುರಿತು ತನಿಖೆ ನಡೆಯುತ್ತಿದೆ. ತಲೆಮರೆಸಿಕೊಂಡಿರುವ ಫ್ಯಾಕ್ಟರಿಯ ಮಾಲಿಕನ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದರು.

 ಹಲವಾರು ಪಟಾಕಿ ತಯಾರಿಕೆ ಘಟಕಗಳು ಸೂಕ್ತ ಪರವಾನಿಗೆ ಹೊಂದಿಲ್ಲ ಮತ್ತು ದುರ್ಘಟನೆಗಳನ್ನು ತಡೆಯಲು ಕಡ್ಡಾಯ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂದು ಆರೋಪಿಸಿದ ಶಿವಕಾಶಿಯ ಪಟಾಕಿ ಕಾರ್ಖಾನೆಗಳ ನೌಕರರ ಸಂಘದ ಪದಾಧಿಕಾರಿ ಕರ್ಮಗಂ ಪಾಂಡಿಯನ್ ಅವರು,ಇಂತಹ ಘಟಕಗಳನ್ನು ಮುಚ್ಚುವಂತೆ ಸರಕಾರವನ್ನು ಆಗ್ರಹಿಸಿದರು.

 ದುರಂತ ಸಾವುಗಳಿಗೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರು,ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ. ಮತ್ತು ಗಂಭೀರವಾಗಿ ಗಾಯಗೊಂಡಿರುವವರಿಗೆ ತಲಾ ಒಂದು ಲ.ರೂ.ಪರಿಹಾರಗಳನ್ನು ಪ್ರಕಟಿಸಿದ್ದಾರೆ.

ನತದೃಷ್ಟ ಕಾರ್ಮಿಕರ ಸಾವುಗಳಿಗೆ ಸಂತಾಪ ವ್ಯಕ್ತಪಡಿಸಿರುವ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು,ದೀಪಾವಳಿಗೆ ಮುನ್ನ ಪಟಾಕಿ ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News