ವ್ಯಕ್ತಿಗತ ಐಟಿಆರ್, ಜಿಎಸ್‌ಟಿ ರಿಟರ್ನ್ ಸಲ್ಲಿಕೆಗೆ ಗಡುವು ಡಿ.31ರವರೆಗೆ ವಿಸ್ತರಣೆ

Update: 2020-10-24 14:12 GMT

ಹೊಸದಿಲ್ಲಿ,ಅ.24: ವ್ಯಕ್ತಿಗತ ಆದಾಯ ತೆರಿಗೆದಾರರು 2019-20 ಹಣಕಾಸು ವರ್ಷಕ್ಕೆ ತಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್)ಗಳನ್ನು ಸಲ್ಲಿಸಲು ಗಡುವನ್ನು ಸರಕಾರವು ಇನ್ನೂ ಒಂದು ತಿಂಗಳು ಅಂದರೆ 2020,ಡಿ.31ರವರೆಗೆ ವಿಸ್ತರಿಸಿದೆ. ಲೆಕ್ಕ ಪರಿಶೋಧನೆ ಅಗತ್ಯವಿರುವ ತೆರಿಗೆದಾರರು ತಮ್ಮ ಐಟಿಆರ್‌ಗಳನ್ನು ಸಲ್ಲಿಸಲು ಗಡುವನ್ನು 2021,ಜ.31ರವರೆಗೆ ವಿಸ್ತರಿಸಲಾಗಿದೆ. ಸರಕಾರವು ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ಮೇ ತಿಂಗಳಿನಲ್ಲಿ 2019-20ನೇ ಸಾಲಿನ ವಿವಿಧ ಐಟಿಆರ್‌ಗಳ ಸಲ್ಲಿಕೆಗೆ ಗಡುವುಗಳನ್ನು ಜು.31ರಿಂದ ನ.30ಕ್ಕೆ ವಿಸ್ತರಿಸಿತ್ತು.

ಅಂತರ್ ರಾಷ್ಟ್ರೀಯ/ನಿರ್ದಿಷ್ಟ ದೇಶೀಯ ವಹಿವಾಟುಗಳಿಗೆ ಸಂಬಂಧಿಸಿದ ವರದಿಗಳನ್ನು ಸಲ್ಲಿಸಬೇಕಾದವರು ಐಟಿಆರ್‌ಗಳನ್ನು ದಾಖಲಿಸಲು ಕೊನೆಯ ದಿನಾಂಕವನ್ನೂ 2021,ಜ.31ಕ್ಕೆ ವಿಸ್ತರಿಸಲಾಗಿದೆ ಎಂದೂ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯು ಹೇಳಿಕೆಯಲ್ಲಿ ತಿಳಿಸಿದೆ.

 ಸ್ವಯಂಘೋಷಿತ ತೆರಿಗೆ ಪಾವತಿಗೆ ಅಂತಿಮ ದಿನಾಂಕಗಳನ್ನೂ ವಿಸ್ತರಿಸಿರುವ ಇಲಾಖೆಯು ತನ್ಮೂಲಕ ಸಣ್ಣ ಮತ್ತು ಮಧ್ಯಮ ತೆರಿಗೆದಾರರಿಗೂ ನೆಮ್ಮದಿಯನ್ನು ಕಲ್ಪಿಸಿದೆ.

 ಇದೇ ವೇಳೆ ಸರಕಾರವು 2018-19ನೇ ಸಾಲಿಗೆ ಜಿಎಸ್‌ಟಿ ವಾರ್ಷಿಕ ರಿಟರ್ನ್‌ಗಳನ್ನು ಸಲ್ಲಿಸಲು ಗಡುವನ್ನು ಡಿ.31ರವರೆಗೆ ವಿಸ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News