ಪೊಲೀಸರನ್ನು ವಿಶ್ವಸನೀಯ ಸಾಕ್ಷಿಗಳಾಗಿ ಪರಿಗಣಿಸಬಹುದು: ದಿಲ್ಲಿ ಹೈಕೋರ್ಟ್

Update: 2020-10-24 17:22 GMT

ಹೊಸದಿಲ್ಲಿ,ಅ.24: ಪೊಲೀಸ್ ಅಧಿಕಾರಿಗಳು ಹಿತಾಸಕ್ತಿಯುಳ್ಳ ಸಾಕ್ಷಿಗಳಾಗಿದ್ದು, ಅವರು ನೀಡುವ ಸಾಕ್ಷ್ಯಗಳನ್ನು ನಂಬುವಂತಿಲ್ಲವೆಂಬ ದಿಲ್ಲಿ ಗಲಭೆ ಪ್ರಕರಣದ ಆರೋಪಿಯೊಬ್ಬನ ವಾದವನ್ನು ದಿಲ್ಲಿಯ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ. ದಿಲ್ಲಿ ಗಲಭೆ ಸಂದರ್ಭದಲ್ಲಿ ನಡೆದ ಪೊಲೀಸ್ ಕಾನ್‌ಸ್ಟೇಬಲ್ ರತನ್ ಲಾಲ್ ಕೊಲೆ ಪ್ರಕರಣದ ಆರೋಪಿಯಾಗಿರುವ ಶದಾಬ್ ಆಹ್ಮದ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ.ಯ ವಿಚಾರಣೆಯನ್ನು ನ್ಯಾಯಾಲಯ ಇಂದು ಕೈಗೆತ್ತಿಕೊಂಡಿತ್ತು.

  ಆತನ ಪರವಾಗಿ ನ್ಯಾಯವಾದಿಗಳಾದ ಸೀಮಾ ಮಿಶ್ರಾ, ಶಿವಾನಿ ಶರ್ಮಾ ಹಾಗೂ ಕಾರ್ತಿಕ್ ಮುರುಕುಟ್ಲಾ ನ್ಯಾಯಾಲಯದ ಮುಂದೆ ವಾದಿಸುತ್ತಾ, ಅಹ್ಮದ್ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವನೆಂಬ ಕಾರಣಕ್ಕಾಗಿ ಆತನ ವಿರುದ್ಧ ತನಿಖಾ ಸಂಸ್ಥೆಯು ತಪ್ಪಾಗಿ ಹಾಗೂ ದುರುದ್ದೇಶದಿಂದ ದೋಷಾರೋಪ ಹೊರಿಸಿದೆ ಎಂದು ಹೇಳಿದರು.

 ಅಹ್ಮದ್‌ಗೆ ಜಾಮೀನು ಬಿಡುಗಡೆ ದೊರೆಯುವುದಕ್ಕೆ ಪೂರಕವಾದ ಕಾರಣಗಳನ್ನು ಕೂಡಾ ಅವರು ನ್ಯಾಯಾಲಯಕ್ಕೆ ವಿವರಿಸಿದರು. ಹಲವಾರು ಸಾರ್ವಜನಿಕರ ಜೊತೆಗೆ ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಕೂಡಾ ಸಾಕ್ಷಿಗಳೆಂದು ಪರಿಗಣಿಸಲಾಗಿದ್ದು, ಅದು ವಿಶ್ವಸನೀಯವಲ್ಲವೆಂದು ಆರೋಪಿ ಪರ ವಕೀಲರು ವಾದಿಸಿದರು.

 ‘‘ ಪೊಲೀಸ್ ಸಾಕ್ಷಿದಾರರು (ಮೂವರು ಗಸ್ತು ಕಾನ್‌ಸ್ಟೇಬಲ್‌ಗಳು) ಈ ವಿಷಯದಲ್ಲಿ ‘ಹಿತಾಸಕ್ತಿಯಿರುವ ಸಾಕ್ಷ್ಯಗಳಾಗಿದ್ದಾರೆ. ಅವರ ಹೇಳಿಕೆಗಳೆಲ್ಲವೂ ಪಡಿಯಚ್ಚಾಗಿದ್ದು, ಚಾಚೂತಪ್ಪದೆ ಉರುಹೊಡೆದಂತಿದೆ ಎಂದು ಮೂವರು ವಕೀಲರು ವಾದಿಸಿದರು. ಘಟನೆ ನಡೆದ ಕೆಲವು ದಿನಗಳ ಅಂತರದ ಬಳಿಕ ಆರೋಪಿಯನ್ನು ಪೊಲೀಸ್ ಅಧಿಕಾರಿಗಳು ಗುರುತಿಸಿರುವುದರಿಂದ ಆತನ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಚರ್ಚಾಸ್ಪದಗೊಳಿಸಿದೆಯೆಂದು ಹೇಳಿದರು.

  ವಿಶೇಷ ಸಾರ್ವಜನಿಕ ಅಭಿಯೋಜಕರಾದ ಅಮಿತ್ ಪ್ರಸಾದ್ ಅವರು ಆರೋಪಿ ಪರ ವಕೀಲರುಗಳ ವಾದವನ್ನು ಅಲ್ಲಗಳೆಯುತ್ತಾ ಕಳೆದ ಒಂದೂವರೆ ತಿಂಗಳುಗಳಿಂದ ಆ ಪ್ರದೇಶದಲ್ಲಿ ಗಸ್ತು ಕಾನ್ಸ್‌ಟೇಬಲ್ ಆಗಿ ನಿಯೋಜಿತರಾದ ಪೊಲೀಸ್ ಕಾನ್‌ಸ್ಟೇಬಲ್ ಸುನೀಲ್ ಕುಮಾರ್ ಅವರ ಹೇಳಿಕೆಯ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News