ಲಡಾಕ್ ಮಾತ್ರ ಗುರಿಯಲ್ಲ: ಎಲ್‌ಎಸಿಯುದ್ದಕ್ಕೂ ಚೀನಾ ಸೈನ್ಯದ ಬಲವರ್ಧನೆ

Update: 2020-10-26 17:10 GMT

ಹೊಸದಿಲ್ಲಿ, ಅ.26: ಭಾರತದೊಂದಿಗೆ ಗಡಿ ಬಿಕ್ಕಟ್ಟು ಉಂಟಾಗಿರುವ ಲಡಾಕ್ ‌ನಲ್ಲಿ ಮಾತ್ರವಲ್ಲ, ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಮಿಲಿಟರಿ ಬಲವನ್ನು ಚೀನಾದ ಪೀಪಲ್ಸ್ ಲಿಬರೇಷನ್ ಪಡೆಯ ಪಶ್ಚಿಮ ಪ್ರಾಂತ್ಯ ಕಮಾಂಡ್‌ನ ನೇತೃತ್ವದಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ. ಗಡಿಭಾಗದಲ್ಲಿ ಸೇನೆಯ ಮೂಲಸೌಕರ್ಯವನ್ನು ತ್ವರಿತವಾಗಿ ಹೆಚ್ಚಿಸುತ್ತಿರುವುದಕ್ಕೂ ಟಿಬೆಟನ್ನು ಚೀನಾದ ಭಾಗವನ್ನಾಗಿಸುವ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್‌ರ ನಿರಂತರ ಪ್ರಯತ್ನಕ್ಕೂ ಸಂಬಂಧವಿದೆ ಎಂದು ಭಾರತದ ಅಧಿಕಾರಿಗಳು ಸಂಶಯಿಸಿದ್ದಾರೆ. ಗಡಿಭಾಗದಲ್ಲಿ ಬಿಕ್ಕಟ್ಟು ಉದ್ಭವಿಸಿರುವ ಲಡಾಖ್‌ನ ಕೆಲವೆಡೆ ಹಾಗೂ ಚೀನಾ ಅತಿಕ್ರಮಿಸಿರುವ ಅಕ್ಸಾಯ್ ಚಿನ್ ಪ್ರದೇಶದಲ್ಲಿ ಮಾತ್ರ ಚೀನಾ ತನ್ನ ಬಲವನ್ನು ಹೆಚ್ಚಿಸುತ್ತಿದೆ ಎಂದು ಆರಂಭದಲ್ಲಿ ಊಹಿಸಿದ್ದೆವು. ಆದರೆ ವಾಸ್ತವಾಂಶ ವಿಭಿನ್ನವಾಗಿದೆ. ಚೀನಾ ಎಲ್‌ಎಸಿಯುದ್ಧಕ್ಕೂ ಸೇನೆಯ ಬಲವರ್ಧನೆ ಮಾಡುತ್ತಿರುವುದನ್ನು ಗಮನಿಸಿದ್ದೇವೆ ಎಂದು ಭಾರತದ ಉನ್ನತ ಅಧಿಕಾರಿಗಳು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.

1962ರ ಭಾರತ-ಚೀನಾ ಯುದ್ಧದ ಸಂದರ್ಭ ಮುಂಚೂಣಿ ಸೇನೆಯ ನಿಯೋಜನೆ ನೆಲೆಯಾಗಿದ್ದ ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಕಾಂಕ್ಸಿವಾರ್‌ನಿಂದ ಹೊಟಾನ್ ವಿಮಾನ ನೆಲೆಗೆ ಹೊಸ ರಸ್ತೆ ನಿರ್ಮಿಸಲಾಗಿದೆ. ಅರುಣಾಚಲ ಪ್ರದೇಶದ ಗಡಿ ಭಾಗದ ನ್ಯಾಂಗುಲು ಮತ್ತು ನ್ಯಿಂಗ್ಚಿ ಸೇನಾ ನೆಲೆಯನ್ನು ಆಧುನೀಕರಿಸಲಾಗಿದೆ. ಅರುಣಾಚಲ ಪ್ರದೇಶದ ಗಡಿಭಾಗದಿಂದ 60 ಕಿ.ಮೀ ದೂರದಲ್ಲಿರುವ ನ್ಯಾಂಗುಲು 1962ರ ಭಾರತ-ಚೀನಾ ಯುದ್ಧದಲ್ಲೂ ಚೀನಾ ಸೇನೆಯ ಮುಂಚೂಣಿ ಶಿಬಿರವಾಗಿತ್ತು. ಚೀನಾದ ವಶದಲ್ಲಿರುವ ಅಕ್ಸಾಯ್ ಚಿನ್ ಪ್ರದೇಶದಲ್ಲಿ, ಭಾರತದ ಗಡಿಭಾಗಕ್ಕಿಂತ ಕೇವಲ 82 ಕಿ.ಮೀ ದೂರದಲ್ಲಿ ರುವ ಶಿಕ್ವಾನೆಯಲ್ಲಿ ಸೇನಾ ನೆಲೆಯನ್ನು ನಿರ್ಮಿಸಲಾಗಿದೆ. ಜಾಗತಿಕ ಸಮುದಾಯದ ದೃಷ್ಟಿ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಮೇಲೆ ಕೇಂದ್ರೀಕೃತವಾಗಿರುವಾಗಲೇ ಟಿಬೆಟ್ ಮೇಲೆ ತಮ್ಮ ಮುದ್ರೆಯನ್ನು ಒತ್ತುವ ಉದ್ದೇಶವನ್ನು ಚೀನಾ ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಗಸ್ಟ್ 20ರಂದು ಚೀನಾದಲ್ಲಿ ನಡೆದಿದ್ದ ಟಿಬೆಟ್ ಕುರಿತ ಸಮಾವೇಶದಲ್ಲಿ ಮಾತನಾಡಿದ್ದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಟಿಬೆಟ್‌ನಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಟಿಬ್ ಗಡಿಯಲ್ಲಿ ಭದ್ರತೆಯನ್ನು ಸದೃಢಗೊಳಿಸುವಂತೆ ಮತ್ತು ಪ್ರತಿಯೊಬ್ಬ ಟಿಬೆಟ್ ಯುವಜನರಲ್ಲೂ ಚೀನಾದ ಬಗ್ಗೆ ಪ್ರೀತಿಯ ಭಾವನೆಯ ಬೀಜ ಬಿತ್ತುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಟಿಬೆಟ್ ವಿಷಯದಲ್ಲಿ ಚೀನಾದ ಆಕ್ರಮಣಕಾರಿ ವರ್ತನೆಯ ಹಿನ್ನೆಲೆಯಲ್ಲಿ, ಅಮೆರಿಕವು ಅಕ್ಟೋಬರ್ 14ರಂದು ಪ್ರಜಾಪ್ರಭುತ್ವ, ಕಾರ್ಮಿಕ ಮತ್ತು ಮಾನವಹಕ್ಕು ಮಂಡಳಿಯ ಉಪಕಾರ್ಯದರ್ಶಿ ರಾಬರ್ಟ್ ಎ ಡೆಸ್ಟ್ರೋರನ್ನು ಟಿಬೆಟ್ ವಿಷಯದಲ್ಲಿ ವಿಶೇಷ ಸಂಯೋಜಕರನ್ನಾಗಿ ನೇಮಿಸಿದೆ. ಟಿಬೆಟ್‌ನ ಭೌಗೋಳಿಕ ಅಸ್ತಿತ್ವತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚೀನಾದ ಆಡಳಿತ ಮತ್ತು 14ನೇ ದಲಾಯಿ ಲಾಮಾರ ಮಧ್ಯೆ ಮಾತುಕತೆ ನಡೆಸುವ ಕಾರ್ಯವನ್ನು ಇವರಿಗೆ ವಹಿಸಿಕೊಡಲಾಗಿದೆ. ಆದರೆ, ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಚೀನಾದ ಆಡಳಿತ, ಟಿಬೆಟಿಯನ್ನರ ತಾತ್ಕಾಲಿಕ ನಾಯಕನ ಆಯ್ಕೆಯ ಮೂಲಕ ಟಿಬೆಟ್‌ನ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನದ ಜೊತೆಗೆ,

ಭಾರತದ ಗಡಿಯುದ್ದಕ್ಕೂ ಮಿಲಿಟರಿ ಗೋಡೆ ನಿರ್ಮಿಸುತ್ತಿದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.

ಗುಡ್ಡದೊಳಗೆ ಭೂಗತ ಹೆಲಿಪ್ಯಾಡ್

ಟಿಬೆಟ್‌ನ ಲ್ಹಾಸ ಪ್ರಾಂತ್ಯದಲ್ಲಿ ಚೀನಾದ ಗಾಂಗ್ಗರ್ ವಾಯುನೆಲೆಯಿದೆ. ಇದರ ಬಳಿಯಿರುವ ಗುಡ್ಡವನ್ನು ಅಗೆದು ಅದರಡಿ ಭೂಗತ ಹೆಲಿಪ್ಯಾಡ್ ನಿರ್ಮಿಸಿ ಯುದ್ಧವಿಮಾನವನ್ನು ಸಜ್ಜಾಗಿ ಇರಿಸಲಾಗಿರುವುದು ಉಪಗ್ರಹದಿಂದ ಲಭಿಸಿದ ಚಿತ್ರಗಳಿಂದ ತಿಳಿದು ಬಂದಿದೆ. ಅಲ್ಲದೆ ಕ್ವಿಂೈ ಪ್ರಾಂತ್ಯದ ಗೋಲ್ಮುಡ್‌ನಲ್ಲಿ ಬೃಹತ್ ಗೋದಾಮು ಕೇಂದ್ರವನ್ನು ನಿರ್ಮಿಸಲಾಗಿದ್ದು ಶಸ್ತ್ರಾಸ್ತ್ರ ಸಂಗ್ರಹಕ್ಕೆ ಸಜ್ಜಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News