ಚೀನಾದ ಅತಿಕ್ರಮಣ ಎಂಬ ಭಾಗ್ವತ್ ಭಾಷಣವನ್ನು ಸೆನ್ಸಾರ್ ಮಾಡಿ 'ಅತಿಕ್ರಮಣ ಯತ್ನ' ಎಂದು ಟ್ವೀಟ್ ಮಾಡಿದ ಆರೆಸ್ಸೆಸ್

Update: 2020-10-27 07:56 GMT

ಹೊಸದಿಲ್ಲಿ: ಭಾರತವು ಮಿಲಿಟರಿ ಸನ್ನದ್ಧತೆಯಲ್ಲಿ ಚೀನಾಗಿಂತ ಹೆಚ್ಚು ಬಲಶಾಲಿಯಾಗಬೇಕೆಂದು ಹಾಗೂ ಚೀನೀಯರನ್ನು ಹಿಮ್ಮೆಟ್ಟಿಸಲು ಇತರ ನೆರೆ ರಾಷ್ಟ್ರಗಳೊಂದಿಗೆ ಸಂಬಂಧಗಳನ್ನು ಬಲಪಡಿಸಬೇಕೆಂದು ಕರೆ ನೀಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೀಗೆ ಹೇಳುವ ಸಂದರ್ಭ ಚೀನಾ ಭಾರತದ ಭೂಭಾಗವನ್ನು ಪ್ರವೇಶಿಸಿದೆ ಎಂದೂ ಹೇಳಿಬಿಟ್ಟಿದ್ದಾರೆ. ಭಾರತದ ಭೂಭಾಗವನ್ನು ಚೀನಾ ಪ್ರವೇಶಿಸಿಲ್ಲ ಎಂದು ಪ್ರಧಾನಿ ಆರಂಭದಲ್ಲಿ ಖಡಾಖಂಡಿತವಾಗಿ ಹೇಳಿದ್ದರೂ ನಂತರ ಈ ವಿಚಾರ ಪ್ರಸ್ತಾಪಿಸಿಲ್ಲದೇ ಇರುವುದನ್ನು ಇಲ್ಲಿ ಸ್ಮರಿಸಬಹುದು.

"ಕೋವಿಡ್ ಸಾಂಕ್ರಾಮಿಕದ ನಡುವೆ ಚೀನಾ ನಮ್ಮ ಗಡಿಯಲ್ಲಿ ಅತಿಕ್ರಮಣ ನಡೆಸಿದೆ,'' ಎಂದ ಭಾಗ್ವತ್, ಆ ದೇಶದ ಅತಿಕ್ರಮಣಕಾರಿ ಪ್ರವೃತ್ತಿಯ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ ಎಂದರು. ಲಡಾಖ್‍ನಲ್ಲಿನ "ಅತಿಕ್ರಮಣಗಳಿಗೆ'' ಭಾರತದ ಪ್ರತಿಕ್ರಿಯೆ ಚೀನಾವನ್ನು ಸ್ತಬ್ಧಗೊಳಿಸಿದೆ ಹಾಗೂ ಆ ದೇಶಕ್ಕೆ ಆಘಾತ ನೀಡಿದೆ ಎಂದು ಅವರು ರವಿವಾರ ಆರೆಸ್ಸೆಸ್ಸಿನ ವಾರ್ಷಿಕ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದ್ದಾರೆಂದು ವರದಿಯಾಗಿದೆ.

"ಚೀನಾ ಹೇಗೆ ಪ್ರತಿಕ್ರಿಯಿಸಲಿದೆ ಎಂದು ನಮಗೆ ತಿಳಿದಿಲ್ಲ. ಆದುದರಿಂದ ನಾವು ಸದಾ ಎಚ್ಚರಿಕೆಯಿಂದ ಹಾಗೂ ಸನ್ನದ್ಧತೆಯಿಮದ ಇರಬೇಕಿದೆ, ಸರಕಾರ ತನ್ನ ನೆರೆ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ ಮತ್ತಿತರರ ಜತೆ  ಸಂಬಂಧ ಗಟ್ಟಿಗೊಳಿಸಬೇಕಿದೆ. ಭಾರತ ದೊಡ್ಡ ಶಕ್ತಿಯಾಗಬೇಕಿದೆ ಹಾಗೂ ಚೀನಾಗಿಂತ ಪ್ರಬಲವಾಗಬೇಕಿದೆ,'' ಎಂದು ಭಾಗ್ವತ್ ಹೇಳಿದರು.

ಪ್ರಧಾನಿಯ ಹೇಳಿಕೆಗೆ ವ್ಯತಿರಿಕ್ತವಾಗಿರುವ ಭಾಗ್ವತ್ ಅವರ ಈ ಹೇಳಿಕೆ ಆರೆಸ್ಸೆಸ್ಸಿಗೆ ಸಮಾಧಾನ ತಂದಿಲ್ಲವೆನ್ನಲಾಗಿದ್ದು, ಭಾಗ್ವತ್ ಭಾಷಣದ ತಕ್ಷಣ ಅವರ ಭಾಷಣದ ತಿದ್ದುಪಡಿಗೊಳಿಸಲಾದ ಭಾಗವನ್ನು ಅದು ಟ್ವೀಟ್ ಮಾಡಿದೆ. "ನಮ್ಮ ಗಡಿಗಳಲ್ಲಿ ಅತಿಕ್ರಮಣದ ಬದಲು ಅತಿಕ್ರಮಣ ಯತ್ನ'' ಎಂದು ಅವರ ಭಾಷಣದಲ್ಲಿ ತಿದ್ದುಪಡಿ ಮಾಡಲಾಗಿದೆ. ಭಾಗ್ವತ್ ತಮ್ಮ ಭಾಷಣದಲ್ಲಿ "ಹಮಾರಿ ಸೀಮಾವೋಂ ಕಾ ಜೋ ಅತಿಕ್ರಮಣ್ ಕಿಯಾ'' ಎಂದು  ಹೇಳಿದ್ದರೆ ಅದನ್ನು ತಿದ್ದುಪಡಿ ಮಾಡಿ "ಅತಿಕ್ರಮಣ್ ಕಾ ಪ್ರಯಾಸ್ ಕಿಯಾ'' ಎಂದು ಟ್ವೀಟ್‍ನಲ್ಲಿ ಬರೆಯಲಾಗಿದೆ ಎಂದು thewire.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News