ಅಳಿವಿನಂಚಿನಲ್ಲಿರುವ ಮನುಷ್ಯರು!

Update: 2020-10-29 07:01 GMT

ಭಾರತದಲ್ಲಿ ಆದಿವಾಸಿಗಳು, ಬುಡಕಟ್ಟು ಸಮುದಾಯದ ಜನರು ‘ನಕ್ಸಲ್ ಪೀಡಿತ ಪ್ರದೇಶಕ್ಕೊಳಗಾಗಿರುವವರು’ ಎನ್ನುವ ಕಾರಣಕ್ಕೆ ಹೆಚ್ಚು ಚರ್ಚೆಯಲ್ಲಿರುವವರು. ಕಾಡಲ್ಲಿ ಇರಲೂ ಆಗದೆ, ನಾಡಲ್ಲಿ ಬದುಕಲೂ ಆಗದೆ ಇಂದಿಗೂ ಇವರು ಅತಂತ್ರರಾಗಿ ಬದುಕುತ್ತಿದ್ದಾರೆ. ಭಾರತದ ಪ್ರಭುತ್ವಕ್ಕೆ ತಲೆನೋವಾಗಿದ್ದಾರೆ. ಕಾರ್ಪೊರೇಟ್ ಶಕ್ತಿಗಳ ಕಣ್ಣು ಸಮೃದ್ಧ ಕಾಡುಗಳು ಮತ್ತು ಅಲ್ಲಿರುವ ಗಣಿ ಭೂಮಿಯ ಮೇಲೆ ಬಿದ್ದಂತೆ ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಬದುಕು ನರಕವಾಗುತ್ತಿದೆ. ಇವರ ಅಸಹಾಯಕ ಸ್ಥಿತಿಯನ್ನು ಒಂದೆಡೆ ನಕ್ಸಲರು ಬಳಸುತ್ತಿರುವುದರಿಂದ, ಪೊಲೀಸರು, ಸೇನೆಯ ಕಣ್ಣಿಗೂ ಇವರು ಉಗ್ರರಂತೆಯೇ ಕಾಣುತ್ತಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುವವರನ್ನು ‘ಅರ್ಬನ್ ನಕ್ಸಲರ’ ಹಣೆಪಟ್ಟಿ ಕಟ್ಟಿ ದಮನಿಸುವ ಪ್ರಯತ್ನವೂ ಹೆಚ್ಚಾಗುತ್ತಿದೆ. ಒಂದೆಡೆ ಪೊಲೀಸರು ಇವರನ್ನು ‘ನಕ್ಸಲರ ಪರವಾಗಿರುವವರು’ ಎಂದು ಅನುಮಾನಿಸಿ ದೌರ್ಜನ್ಯ ಎಸಗುತ್ತಿದ್ದಾರೆ, ಅತ್ತ ನಕ್ಸಲರು ಪೊಲೀಸರ ಮಾಹಿತಿದಾರರು ಎಂದೂ ಕೊಂದು ಹಾಕುವುದಿದೆ. ನಕ್ಸಲ್ ಪ್ರಭಾವಕ್ಕೆ ಒಳಗಾಗಿರುವ ಈಶಾನ್ಯ ಭಾರತದ ಸ್ಥಿತಿಗತಿಯನ್ನು ಒಮ್ಮೆ ಅವಲೋಕಿಸಿದರೆ, ‘ಉಗ್ರವಾದ’ದ ಸೃಷ್ಟಿಗೆ ಪ್ರಭುತ್ವದ ಕೊಡುಗೆ ಎಷ್ಟು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು.

ಭಾರತವು ಒಂದು ವೈವಿಧ್ಯಮಯ ಜನಸಮುದಾಯಗಳನ್ನೊಳಗೊಂಡ ದೇಶವಾಗಿದೆ. ಈ ಮಣ್ಣಿನ ಸಾಂಸ್ಕೃತಿಕ ಅಸ್ಮಿತೆ ಉಳಿದುಕೊಂಡಿರುವುದೇ ಈ ಬುಡಕಟ್ಟು ಜನಸಮುದಾಯಗಳ ಮೂಲಕ. 698 ಸಮುದಾಯಗಳಿಗೆ ಸೇರಿದ 8.40 ಕೋಟಿಗೂ ಅಧಿಕ ಜನರನ್ನು ಪರಿಶಿಷ್ಟ ಪಂಗಡ (ಎಸ್ಟಿ)ಗಳೆಂಬುದಾಗಿ ಗುರುತಿಸಲಾಗಿದ್ದು, ಅವರು ಭಾರತದ ಒಟ್ಟು ಜನಸಂಖ್ಯೆಯ 8.2 ಶೇಕಡದಷ್ಟಿದ್ದಾರೆ. 1950ರಲ್ಲೇ ಭಾರತೀಯ ಸಂವಿಧಾನವು ಪರಿಶಿಷ್ಟ ಪಂಗಡಗಳನ್ನು ತಾರತಮ್ಯಕ್ಕೊಳಗಾದ ಸಮುದಾಯವೆಂದು ಪರಿಗಣಿಸಿದ್ದು, ಅವರ ಸಮಗ್ರ ಅಭಿವೃದ್ಧಿಗೆ ಸರಕಾರವು ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು ಅಗತ್ಯವಿರುವುದನ್ನು ಪ್ರತಿಪಾದಿಸಿದೆ. ಬುಡಕಟ್ಟು ಸಮುದಾಯದ ದಲಿತರು ಸಾಮಾಜಿಕ ಕಾರಣಕ್ಕಲ್ಲದೆ, ರಾಜಕೀಯ ಕಾರಣಗಳಿಂದಲೂ ದಮನಿತರಾಗಿದ್ದಾರೆ. ಈ ರಾಜಕೀಯ ಕಾರಣಗಳು ಇವರ ಬಳಿಗೆ ಆರೋಗ್ಯ ವ್ಯವಸ್ಥೆ ಮತ್ತು ಶಿಕ್ಷಣ ತಲುಪದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಇತ್ತೀಚೆಗೆ ಒಡಿಶಾದ ಕಾಲಾಹಂಡಿಯಲ್ಲಿ ಕಡುಬಡವನೊಬ್ಬ ಸಾವಿಗೀಡಾದ ತನ್ನ ಪತ್ನಿಯ ಶವವನ್ನು ಬೈಸಿಕಲ್‌ನಲ್ಲಿರಿಸಿ ಅಂತ್ಯಕ್ರಿಯೆಯಾಗಿ 50 ಕಿ.ಮೀ.ವರೆಗೆ ಪ್ರಯಾಣಿಸಿದ ಘಟನೆಯು ಇಡೀ ದೇಶವನ್ನೇ ಮರುಗುವಂತೆ ಮಾಡಿತು. ಇದಕ್ಕೂ ಹಿಂದೆ ಹೋಗುವುದಾದರೆ ಬಿಹಾರದಲ್ಲಿ ದಶರಥ್ ಮಾಂಜಿ ಎಂಬಾತ, ಆಸ್ಪತ್ರೆಗೆ ತಲುಪಲಾಗದೆ ಹೆರಿಗೆ ನೋವಿನಿಂದಲೇ ಮೃತಪಟ್ಟ ತನ್ನ ಪತ್ನಿಯ ನೆನಪಿಗಾಗಿ ಬೆಟ್ಟವನ್ನೇ ಕಡಿದು ರಸ್ತೆಯನ್ನು ನಿರ್ಮಿಸಿದ್ದ ಯಶೋಗಾಥೆ ಈಗಲೂ ಜನಮನದಲ್ಲಿ ಉಳಿದಿದೆ. ಇಂತಹ ಘಟನೆಗಳು ಬುಡಕಟ್ಟು ಜನರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯು ಎಡವಿರುವುದರ ಬಗ್ಗೆ ಬೆಳಕನ್ನು ಚೆಲ್ಲುತ್ತವೆ.

ಆರೋಗ್ಯ ವಿಷಯಗಳಲ್ಲಿ ಮೂಲನಿವಾಸಿಗಳು ಹಾಗೂ ಮೂಲನಿವಾಸಿಗಳಲ್ಲದ ಜನರ ನಡುವೆ ಅಜಗಜಾಂತರ ವ್ಯತ್ಯಾಸಗಳಿವೆ. ಬುಡಕಟ್ಟು ಜನರ ಆರೋಗ್ಯ ಸೂಚ್ಯಂಕಗಳು ತೀರಾ ಕೆಳಮಟ್ಟದಲ್ಲಿವೆ. 2015-16ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಸಮೀಕ್ಷೆ-4ರ ಪ್ರಕಾರ ಮೂಲನಿವಾಸಿ ಜನಾಂಗಗಳಲ್ಲಿ ಪ್ರತಿ 1,000 ಜನರ ಪೈಕಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಪ್ರಮಾಣವು 57.2 ಆಗಿದೆ. ಅದರೆ ಮೂಲನಿವಾಸಿಗಳಲ್ಲದ ಜನಾಂಗಗಳಲ್ಲಿ ಆ ಪ್ರಮಾಣವು 38.5 ಶೇಕಡ ಆಗಿದೆ.ಅದೇ ರೀತಿ ಶಿಶುಗಳ ಸಾವಿನ ಪ್ರಮಾಣವು ಮೂಲನಿವಾಸಿ ಜನಾಂಗಗಳಲ್ಲಿ ಸಾವಿರ ಜನರಲ್ಲಿ 44.4 ಆಗಿದೆ. ಬಡತನ ಹಾಗೂ ಮಕ್ಕಳ ಅಪೌಷ್ಟಿಕತೆಯು ಬುಡಕಟ್ಟು ಜನಾಂಗಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿವೆ. ಇಂದಿಗೂ ಕೂಡಾ ಬುಡಕಟ್ಟು ಜನಾಂಗಗಳು ವಾಸವಾಗಿರುವ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳು ಅಭಿವೃದ್ಧಿಯಾಗಿಲ್ಲ. ಉತ್ತಮ ದರ್ಜೆಯ ಆರೋಗ್ಯ ಸೇವೆಗಳಿಂದ ಅವರು ವಂಚಿತರಾಗುತ್ತಲೇ ಇದ್ದಾರೆ. ಆಗಸ್ಟ್ ತಿಂಗಳ ಕೊನೆಯಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಾವಳಿಯು ವ್ಯಾಪಕವಾಗಿದ್ದಾಗಲೂ, ಛತ್ತೀಸ್‌ಗಢದ ಕೆಲವು ದುರ್ಗಮ ಪ್ರದೇಶಗಳಲ್ಲಿ ವಾಸವಾಗಿರುವ ಆದಿವಾಸಿಗಳು ಆ ರೋಗದ ಕುರಿತಾಗಿ ಕೇಳಿಯೇ ಇರಲಿಲ್ಲ. ಆ ವೇಳೆಗೆ ಒಡಿಶಾ ಹಾಗೂ ಗ್ರೇಟ್ ನಿಕೋಬಾರ್‌ನ ಅತ್ಯಂತ ದುರ್ಗಮ ಪ್ರದೇಶಗಳು ಕೂಡಾ ಕೊರೋನ ವೈರಸ್ ಸೋಂಕಿನಿಂದ ಪೀಡಿತವಾಗಿದ್ದವು.

ಬುಡಕಟ್ಟು ಜನಾಂಗಗಳು ತಮ್ಮ  ಬಹುತೇಕ ಆರೋಗ್ಯ ಪಾಲನೆಯ ಅವಶ್ಯಕತೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಅಥವಾ ಗ್ರಾಮಾಂತರ ಪ್ರದೇಶಗಳಲ್ಲಿರುವ ತಮ್ಮವರೇ ಆದ ಪಾರಂಪರಿಕ ನಾಟಿ ವೈದ್ಯರನ್ನು ಅವಲಂಬಿಸಿದ್ದಾರೆ. ಈ ನಾಟಿ ವೈದ್ಯರು ಗಿಡಮೂಲಿಕೆಗಳು, ಹೂವುಗಳು, ಪ್ರಾಣಿಗಳು ಮತ್ತಿತರ ಪ್ರಾಕೃತಿಕವಾಗಿ ಲಭ್ಯವಿರುವ ವಸ್ತುಗಳನ್ನು ತಮ್ಮ ಚಿಕಿತ್ಸೆಗೆ ಬಳಸಿಕೊಳ್ಳುತ್ತಾರೆ. ಅನೇಕ ಸಂದರ್ಭಗಳಲ್ಲಿ ಈ ನಾಟಿ ವೈದ್ಯರು ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಮೂಢನಂಬಿಕೆಯ ವಿಧಿವಿಧಾನಗಳಿಗೆ ಮೊರೆಹೋಗುತ್ತಾರೆ. ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬುಡಕಟ್ಟು ಜನರ ವಸತಿ ಪ್ರದೇಶಗಳ ಸಮೀಪ ಕಾರ್ಯನಿರ್ವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪ್ರಾಥಮಿಕ ಮಟ್ಟದ ಆರೋಗ್ಯ ಸೇವೆಗಳನ್ನಷ್ಟೇ ಒದಗಿಸುತ್ತಿವೆ. ಅದರಾಚೆಗಿನ ವೈದ್ಯಕೀಯ ಸೌಲಭ್ಯಗಳನ್ನು ಬುಡಕಟ್ಟು ಜನರಿಗೆ ತಲುಪಿಸುವಲ್ಲಿ ಅವುಗಳಿಗೆ ಸಾಧ್ಯವಾಗುತ್ತಿಲ್ಲ. ದೇಶಾದ್ಯಂತ ಬುಡಕಟ್ಟು ಸಮುದಾಯಗಳು ವಾಸಿಸುತ್ತಿರುವ ಪ್ರದೇಶಗಳಲ್ಲಿ ಆರೋಗ್ಯ ಮೂಲ ಸೌಕರ್ಯಗಳನ್ನು ಅಭಿವೃದ್ದಿಪಡಿಸಲು ನಿರ್ದಿಷ್ಟವಾದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಬುಡಕಟ್ಟು ಪ್ರದೇಶಗಳಲ್ಲಿ ನಿಯೋಜಿತವಾಗಿರುವ ವೈದ್ಯರಿಗೆ ಆರ್ಥಿಕ ಉತ್ತೇಜನಗಳನ್ನು ಒದಗಿಸಬೇಕು. ಬುಡಕಟ್ಟು ಜನರ ಪ್ರದೇಶಗಳಲ್ಲಿ ವೈದ್ಯರು ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸುವುದು, ಬುಡಕಟ್ಟು ಪ್ರದೇಶಗಳ ಜನರ ಸೇವೆಗಾಗಿ ವಿಶೇಷ ಆರೋಗ್ಯ ತಂಡಗಳ ರಚಿಸುವ ತುರ್ತು ಅಗತ್ಯವಿದೆ. ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಪಾಲನಾ ಸೌಲಭ್ಯವನ್ನು ಒದಗಿಸಲು ನರ್ಸ್ ಗಳು,ಪ್ರಸೂತಿದಾದಿಯರು (ಮಿಡ್‌ವೈಫ್), ಪುರುಷ ನರ್ಸಿಂಗ್ ಉದ್ಯೋಗಿಗಳು, ಫಾರ್ಮಾಸಿಸ್ಟ್ಟ್‌ಗಳಿಗೆ ಉತ್ತಮ ತರಬೇತಿ ನೀಡಿ ಅವರನ್ನು ಸಬಲೀಕರಣಗೊಳಿಸುವ ಅಗತ್ಯವಿದೆ.

ಆದರೆ ಇಂದು ಈ ದುರ್ಬಲ ಸಮುದಾಯಗಳ ಪರವಾಗಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಹೆಚ್ಚುತ್ತಿವೆೆ. ಇವರ ಪರವಾಗಿ ಧ್ವನಿಯೆತ್ತುವ ಮುಖಂಡರನ್ನು ನಕ್ಸಲ್‌ವಾದಿಗಳೆಂದು ಸರಕಾರ ಬಂಧಿಸುತ್ತಿದೆ. ‘ಸೇವೆ’ಯ ಹೆಸರಿನಲ್ಲಿ ರಾಜಕೀಯ ಶಕ್ತಿಗಳು ಇವರ ಬದುಕನ್ನು ಕಂಗೆಡಿಸಿವೆ. ಒಂದೆಡೆ ಬಲಪಂಥೀಯ ಸಂಘಟನೆಗಳು ಈ ಬುಡಕಟ್ಟು, ಆದಿವಾಸಿ ಜನರನ್ನು ತಮ್ಮ ಅಜೆಂಡಾಗಳಿಗೆ ಬಳಸುತ್ತಿದ್ದರೆ, ಇನ್ನೊಂದೆಡೆ ಇವರ ನಡುವೆ ಜಾಗೃತಿ ಬಿತ್ತುವವರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಅವರನ್ನು ಜೈಲಿಗೆ ತಳ್ಳುವ ಕೆಲಸಗಳು ನಡೆಯುತ್ತಿವೆ. ಬುಡಕಟ್ಟು ಜನರ ಪರವಾಗಿ ಧ್ವನಿಯೆತ್ತಿದ ಹಲವು ನಾಯಕರು ಇಂದು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅರಣ್ಯ ಭೂಮಿಯ ಮೇಲೆ ಕಾರ್ಪೊರೇಟ್ ಶಕ್ತಿಗಳ ಕಣ್ಣು ಬಿದ್ದಿರುವುದೂ ಬುಡಕಟ್ಟು ಜನರ ಬದುಕಿಗೆ ಇನ್ನೊಂದು ಕಂಟಕ. ಸರಕಾರದ ಜನ ವಿರೋಧಿ ನೀತಿಗಳ ಕಾರಣದಿಂದಾಗಿ ಇವರು ‘ಅಳಿವಿನಂಚಿನಲ್ಲಿರುವ ಸಮುದಾಯ’ವಾಗಿ ಪರಿವರ್ತನೆಗೊಂಡಿದ್ದಾರೆ. ಕನಿಷ್ಠ ಕಾಡುಪ್ರಾಣಿಗಳ ಬಗ್ಗೆ ಇರುವ ಕಾಳಜಿಯನ್ನಾದರೂ ಸರಕಾರ ಇವರ ಮೇಲೆ ತೋರಿಸಬೇಕಾಗಿದೆ. ಇವರ ಉಳಿವಿಗೆ, ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಈ ಅಳಿವನಂಚಿನಲ್ಲಿರುವ ಮನುಷ್ಯರನ್ನು ಉಳಿಸಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News