ವಿಶ್ವ ಚಾಂಪಿಯನ್ ಕೋಲ್‌ಮನ್‌ಗೆ 2 ವರ್ಷಗಳ ನಿಷೇಧ

Update: 2020-10-28 19:03 GMT

ಟೋಕಿಯೊ: ಡೋಪಿಂಗ್ ನಿಯಂತ್ರಣದ ಮೂರು ನಿಯಮಗಳ ಉಲ್ಲಂಘನೆಯ ಆರೋಪದಲ್ಲಿ ಪುರುಷರ 100 ಮೀಟರ್ ವಿಶ್ವ ಚಾಂಪಿಯನ್ ಕ್ರಿಶ್ಚಿಯನ್ ಕೋಲ್‌ಮನ್ ಅವರನ್ನು ಮಂಗಳವಾರ ಎರಡು ವರ್ಷಗಳ ಕಾಲ ನಿಷೇಧಿಸಲಾಗಿದೆ.

ಅಥ್ಲೀಟ್ ಕೋಲ್‌ಮನ್ ಅವರನ್ನು ಮೇ 2022 ರವರೆಗೆ ಸ್ಪರ್ಧೆಯಿಂದ ನಿಷೇಧಿಸಲಾಗುವುದು ಎಂದು ಟ್ರಾಕ್ ಆ್ಯಂಡ್ ಫೀಲ್ಡ್ ಅಥ್ಲೆಟಿಕ್ಸ್ ಸಮಗ್ರತೆ ಘಟಕವು ತಿಳಿಸಿದೆ. ಇದರಿಂದಾಗಿ ಅವರು ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್‌ನಿಂದ ಹೊರಗುಳಿಯುವಂತಾಗಿದೆ.

 ಅಮೆರಿಕದ 24ರ ಹರೆಯದ ಓಟಗಾರ ಕೋಲ್‌ಮನ್‌ರನ್ನು ಕಳೆದ ಮೇ ತಿಂಗಳಿನಲ್ಲಿ ತಾತ್ಕಾಲಿಕವಾಗಿ ಸ್ಪರ್ಧೆಯಿಂದ ಅಮಾನತುಗೊಳಿಸಲಾಗಿತ್ತು. 2019 ರಲ್ಲಿ ಮಾದರಿ ಸಂಗ್ರಹ ಅಧಿಕಾರಿಗಳನ್ನು ಭೇಟಿಯಾಗಲು ಮೂರು ಬಾರಿ ಅವಕಾಶ ನೀಡಲಾಗಿದ್ದರೂ, ಕೋಲ್‌ಮನ್ ಅವರನ್ನು ಭೇಟಿಯಾಗದೆ ದೂರ ಉಳಿದ್ದರು.

  ಕ್ರೀಡಾಪಟುಗಳು 12 ತಿಂಗಳ ಅವಧಿಯಲ್ಲಿ ಎಲ್ಲಿದ್ದಾರೆ ಎಂದು ತಿಳಿಸುವ ನಿಯಮವನ್ನು ಮೂರು ಬಾರಿ ಉಲ್ಲಂಘಿಸಿದರೆ ಎರಡು ವರ್ಷಗಳ ನಿಷೇಧವನ್ನು ಎದುರಿಸಬೇಕಾಗುತ್ತದೆ. ಕೋಲ್‌ಮನ್ ಅವರಿಗೆ ನಿಷೇಧವನ್ನು ಪ್ರಶ್ನಿಸಿ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ.

ಖತರ್‌ನ ದೋಹಾದಲ್ಲಿ ನಡೆದ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟ ಮತ್ತು 4 ್ಡ 100 ರಿಲೇಯಲ್ಲಿ ಚಿನ್ನ ಗೆದ್ದ ನಂತರ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಅಥ್ಲೀಟ್ ಆಗಿ ಗುರುತಿಸಿಕೊಂಡಿದ್ದರು. ಕೋಲ್‌ಮನ್ ಲಂಡನ್‌ನಲ್ಲಿ ನಡೆದ 2017ರ ವಿಶ್ವ ಚಾಂಪಿಯನ್‌ಶಿಪ್‌ನ ಎರಡೂ ಸ್ಪರ್ಧೆಗಳಲ್ಲಿ ಬೆಳ್ಳಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News