ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ವಿರುದ್ಧ ವೈಯಕ್ತಿಕ ದಾಳಿಗೆ ಭಾರತ ಖಂಡನೆ

Update: 2020-10-29 07:02 GMT

ಹೊಸದಿಲ್ಲಿ : ಪ್ರವಾದಿ ಮುಹಮ್ಮದ್ ಅವರ ಕುರಿತಾದ ವ್ಯಂಗ್ಯ ಚಿತ್ರಗಳನ್ನು ತೋರಿಸುವ ಹಕ್ಕನ್ನು ಸಮರ್ಥಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ ವಿರುದ್ಧ ವೈಯಕ್ತಿಕ ದಾಳಿಯನ್ನು ಭಾರತ ಬುಧವಾರ ತೀವ್ರವಾಗಿ ಖಂಡಿಸಿದೆ. ಇದು ಅಂತರ್‌ರಾಷ್ಟ್ರೀಯ ಸಂವಾದದ ಅತ್ಯಂತ ಮೂಲಭೂತ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ಫ್ರಾನ್ಸ್ ಶಿಕ್ಷಕನೊಬ್ಬನನ್ನು ಹತ್ಯೆಗೈದ ಘಟನೆಯನ್ನು ವಿದೇಶಾಂಗ ಸಚಿವಾಲಯವು ಖಂಡಿಸಿದೆ. ಯಾವುದೇ ಕಾರಣಕ್ಕೂ ಅಥವಾ ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಂತರ್‌ರಾಷ್ಟ್ರೀಯ ಮಾತುಕತೆಯ ಮೂಲಭೂತ ಮಾನದಂಡಗಳನ್ನು ಉಲ್ಲಂಘಿಸಿ ಸ್ವೀಕಾರಾರ್ಹವಲ್ಲದ ರೀತಿಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ ಅವರ ಮೇಲೆ ವೈಯಕ್ತಿಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಫ್ರೆಂಚ್ ಶಿಕ್ಷಕನ ಜೀವವನ್ನು ತೆಗೆದಿರುವ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕ್ರೂರ ಭಯೋತ್ಪಾದಕ ದಾಳಿಯನ್ನೂ ನಾವು ಖಂಡಿಸುತ್ತೇವೆ. ನಾವು ಅವರ ಕುಟುಂಬ ಹಾಗೂ ಫ್ರಾನ್ಸ್ ಜನರಿಗೆ ನಮ್ಮ ಸಂತಾಪವನ್ನು ಸೂಚಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭಾರತದ ವಿದೇಶಾಂಗ ಸಚಿವಾಲಯಕ್ಕೆ ಧನ್ಯವಾದಗಳು. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಫ್ರಾನ್ಸ್ ಹಾಗೂ ಭಾರತ ಯಾವಾಗಲೂ ಪರಸ್ಪರ ನಂಬಿಕೆ ಇಟ್ಟಿವೆ ಎಂದು ಭಾರತದಲ್ಲಿರುವ ಫ್ರೆಂಚ್ ರಾಯಭಾರಿ ಇಮಾನ್ಯುವೆಲ್ ಲೆನೈನ್ ಟ್ವೀಟಿಸಿದ್ದಾರೆ.

ಪ್ರವಾದಿ ಮುಹಮ್ಮದ್ ಅವರ ಕುರಿತಾದ ವ್ಯಂಗ್ಯ ಚಿತ್ರಗಳನ್ನು ಸಮರ್ಥಿಸಿಕೊಂಡಿದ್ದ ಮ್ಯಾಕ್ರೋನ್ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News