ಫ್ರಾನ್ಸ್: ಚರ್ಚ್‌ನಲ್ಲಿ ಮೂವರ ಕೊಲೆ; ಪೊಲೀಸರಿಂದ ದುಷ್ಕರ್ಮಿಯ ಬಂಧನ

Update: 2020-10-29 16:34 GMT

ನೀಸ್ (ಫ್ರಾನ್ಸ್), ಅ. 29: ಫ್ರಾನ್ಸ್‌ನ ನೀಸ್ ನಗರದ ಚರ್ಚೊಂದರಲ್ಲಿ ಗುರುವಾರ ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬರ ತಲೆ ಕಡಿದು ಹಾಗೂ ಇತರ ಇಬ್ಬರನ್ನು ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯನ್ನು ನಗರದ ಮೇಯರ್ ಕ್ರಿಶ್ಚಿಯನ್ ಎಸ್ಟ್ರಾಸಿ ಭಯೋತ್ಪಾದನೆ ಎಂಬುದಾಗಿ ಬಣ್ಣಿಸಿದ್ದಾರೆ.

ನಗರದ ನೋಟ್ರ ಡಾಮ್ ಚರ್ಚ್‌ನಲ್ಲಿ ಭಯೋತ್ಪಾದಕ ದಾಳಿ ಸಂಭವಿಸಿದೆ ಎಂದು ಮೇಯರ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಪ್ರಾರ್ಥನೆಗಾಗಿ ಚರ್ಚ್‌ಗೆ ಬಂದಿದ್ದ ಹಿರಿಯ ಮಹಿಳೆಯೊಬ್ಬರ ತಲೆ ಕಡಿಯಲಾಗಿದೆ. ಹಂತಕನು ಇನ್ನೋರ್ವ ಮಹಿಳೆ ಮತ್ತು ಓರ್ವ ಪುರುಷನನ್ನು ಇರಿದು ಕೊಂದಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ, ಓರ್ವ ಶಂಕಿತನನ್ನು ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಲಾಗಿದೆ.

ಫ್ರಾನ್ಸ್‌ನಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ, ದಕ್ಷಿಣ ಫ್ರಾನ್ಸ್‌ನ ನಗರ ಅವಿಗ್ನಾನ್ ಸಮೀಪದ ಮೊಂಟ್‌ಫವೆಟ್‌ನಲ್ಲಿ ಹ್ಯಾಂಡ್‌ಗನ್ ಮೂಲಕ ಪೊಲೀಸರಿಗೆ ಬೆದರಿಕೆಯೊಡ್ಡಿದನೆನ್ನಲಾದ ವ್ಯಕ್ತಿಯೊಬ್ಬನನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ.

ಫ್ರಾನ್ಸ್‌ನ ಭಯೋತ್ಪಾದನೆ ನಿಗ್ರಹ ಪ್ರಾಸಿಕ್ಯೂಟರ್‌ಗಳು ತನಿಖೆ ಆರಂಭಿಸಿದ್ದಾರೆ.

ಇತ್ತೀಚೆಗೆ ರಾಜಧಾನಿ ಪ್ಯಾರಿಸ್‌ನಲ್ಲಿ ಇತಿಹಾಸದ ಪ್ರಾಧ್ಯಾಪಕ ಸ್ಯಾಮುಯೆಲ್ ಪ್ಯಾಟಿಯನ್ನು ತಲೆ ಕಡಿದು ಕೊಂದ ಘಟನೆಗೂ ಇಂದಿನ ಘಟನೆಗೂ ಸಾಮ್ಯತೆಯಿದೆ ಎಂದು ಮೇಯರ್ ಕ್ರಿಶ್ಚಿಯನ್ ಎಸ್ಟ್ರಾಸಿ ಹೇಳಿದರು. ತನ್ನ ವಿದ್ಯಾರ್ಥಿಗಳಿಗೆ ಪ್ರವಾದಿಯ ವ್ಯಂಗ್ಯಚಿತ್ರಗಳನ್ನು ತೋರಿಸಿದ ಬಳಿಕ, ಅವರ ಕಾಲೇಜಿನ ಸಮೀಪದಲ್ಲೇ ಪ್ಯಾಟಿಯನ್ನು ದುಷ್ಕರ್ಮಿಯೊಬ್ಬ ತಲೆ ಕಡಿದು ಕೊಂದಿದ್ದಾನೆ.

ನೀಸ್‌ನಲ್ಲಿ ನಡೆದ ಹತ್ಯೆಗಳಿಗೆ ಏನು ಕಾರಣ ಎಂಬುದನ್ನು ಪೊಲೀಸರು ತಿಳಿಸಿಲ್ಲ.

ಪ್ರವಾದಿಯ ವ್ಯಂಗ್ಯಚಿತ್ರಗಳ ಪ್ರಕಟನೆಗೆ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಬೆಂಬಲ ವ್ಯಕ್ತಪಡಿಸಿದ ಬಳಿಕ, ಕೆಲವು ಮುಸ್ಲಿಮ್ ಬಾಹುಳ್ಯದ ದೇಶಗಳಲ್ಲಿ ಪ್ರತಿಭಟನೆಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News