ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ: ಡಿ.ಕೆ ಶಿವಕುಮಾರ್

Update: 2020-10-29 13:43 GMT

ಬೆಂಗಳೂರು, ಅ.29: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕಣ್ಣೀರಿಗೂ, ಬಿಜೆಪಿ ಅಭ್ಯರ್ಥಿಯಾದ ಮುನಿರತ್ನ ಕಣ್ಣೀರಿಗೂ ಬಹಳಷ್ಟು ವ್ಯತ್ಯಾಸ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಗುರುವಾರ ರಾಜರಾಜೇಶ್ವರಿ ನಗರದಲ್ಲಿ ಅನ್ಯ ಪಕ್ಷಗಳ ಮುಖಂಡರುಗಳು ಕಾಂಗ್ರೆಸ್‍ಗೆ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಶಿವಕುಮಾರ್ ಅವರು ಮಾಧ್ಯಮದವರ ಜತೆ ಮಾತನಾಡಿದ ಅವರು, ಮುನಿರತ್ನ ನಿರ್ಮಾಪಕರಾಗಿದ್ದವರು ಈಗ ನಟರಾಗಿದ್ದಾರೆ ಅಷ್ಟೇ. ಕುಸುಮಾ ಅವರು ತಮ್ಮ ಜೀವನ ನೆನೆಸಿಕೊಂಡು, ತಮಗಾದ ನಷ್ಟ, ನೋವುಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಆದರೆ, ಮುನಿರತ್ನ ಅವರು ತಮಗೆ ಇಂತಾ ಸ್ಥಿತಿ ತಂದುಕೊಂಡನಲ್ಲಾ ಅಂತಾ ಕಣ್ಣೀರು ಹಾಕುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ನನ್ನ ಉಸಿರು, ನನ್ನ ರಕ್ತ ಅಂತಾ ಹೇಳಿದ್ದ ಮುನಿರತ್ನ ಈಗ ಬಿಜೆಪಿಯಲ್ಲಿ ಮತ ಕೇಳುತ್ತಿದ್ದೇನಲ್ಲಾ ಅಂತಾ ನೆನೆಸಿಕೊಂಡು ಅತ್ತಿದ್ದಾರೆ. ಅಲ್ಲದೆ, ಜನರು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ ಕಣ್ಣೀರು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತನ್ನ ವಿರುದ್ಧ ಭಾಷಣ ಮಾಡಿದ್ದರು, ಈಗ ಅವರ ಪಕ್ಷ ಸೇರಿಕೊಂಡು ಚುನಾವಣೆ ಎದುರಿಸಬೇಕಾಗಿದೆಯಲ್ಲ ಅಂತಾ ಕಣ್ಣೀರಾಕಿರಬಹುದು ಎಂದು ವ್ಯಂಗ್ಯವಾಡಿದರು.

ಮುನಿರತ್ನ ನಟನೆಯನ್ನು ನೋಡುತ್ತಿರುವ ಜನ ದಡ್ಡರಲ್ಲ. ನಾನು ಕಣ್ಣೀರು ಹಾಕಿದರೂ ಬೇರೆಯವರು ಹಾಕಿದರೂ ಏನು ಆಗುವುದಿಲ್ಲ. ಈಗ ಕಣ್ಣೀರು ಹಾಕಿ ಪ್ರಯೋಜನ ಇಲ್ಲ. ಇಂದು ದೇವಾಲಯಕ್ಕೆ ಹೋಗಿ ದೇವರ ಆಶೀರ್ವಾದ ಪಡೆದೆ ಹಾಗೂ ಚರ್ಚ್‍ಗೆ ಭೇಟಿ ಕೊಟ್ಟು ಪಾದ್ರಿಗಳನ್ನು ಭೇಟಿ ಮಾಡಿದೆ. ನೀವು ಆಶೀರ್ವಾದ ಮಾಡಿದರೂ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಚುನಾವಣೆ ನಂತರ ಧರ್ಮದ ವಿಚಾರ: ಕಪಾಲಿ ಬೆಟ್ಟದ ವಿಚಾರವಾಗಿ ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, 3 ರಂದು ನಡೆಯುವ ಚುನಾವಣೆ ಆಗಲಿ ಆಮೇಲೆ ಧರ್ಮದ ವಿಚಾರವಾಗಿ ಮಾತನಾಡೋಣ ಎಂದರು.

ಈ ಹಿಂದೆ ಆಡಿದ ಮಾತಿಗೆ ಬದ್ಧರಾ?: ಮುನಿರತ್ನ ಅವರ ವಿರುದ್ಧ ಮೋದಿ, ಸದಾನಂದಗೌಡ, ಯಡಿಯೂರಪ್ಪನವರು ಆಡಿದ ಮಾತಿಗೆ ಈಗಲೂ ಬದ್ಧರಾಗಿದ್ದಾರಾ ಇಲ್ಲವಾ? ಎಂಬುದನ್ನು ಕೇಳಿ. ಇನ್ನು ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಝಮೀರ್ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು ಎಂದು ಹೇಳಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಸಾಕಷ್ಟು ಮಾಹಿತಿ ಇದೆ. ಇದರಿಂದಲೇ 15 ದಿನದ ಬಳಿಕ ಸಿಎಂ ಯಡಿಯೂರಪ್ಪ ಅವರ ಪದತ್ಯಾಗದ ಕುರಿತು ತಿಳಿಸಿರಬಹುದು. ಅಲ್ಲದೇ, ಸಿದ್ದರಾಮಯ್ಯ ಅವರಿಗೆ ಜ್ಞಾನ ಇದೆ. ನಮ್ಮ ಪಾರ್ಟಿ ಬಿಟ್ಟು ಹೋದವರೆಲ್ಲಾ ಏನೇನು ಮಾತನಾಡಿದ್ದಾರೋ ಗೊತ್ತಿಲ್ಲ. ಅನೇಕ ಶಾಸಕರು, ಮಂತ್ರಿಗಳು ಈ ಬಗ್ಗೆ ಮಾತನಾಡುತ್ತಾ ಇದ್ದಾರೆ. ಆ ಹಿನ್ನೆಲೆಯಲ್ಲಿ ನಾನೇನು ವ್ಯಾಖ್ಯಾನ ಮಾಡುವುದಿಲ್ಲ. ಮೊದಲು ಎಲೆಕ್ಷನ್ ಮಾಡೋಣ. ಚುನಾವಣೆ ಮುಗಿದ ಮೇಲೆ ನೋಡೋಣ ಎಂದು ನುಡಿದರು.

ಪಕ್ಷ ಸೇರ್ಪಡೆ: ಪ್ರೊಫೆಸರ್ ಸಿದ್ದರಾಜು ಹಾಗೂ ಬೆಂಬಲಿಗರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ರಾಜರಾಜೇಶ್ವರಿನಗರ ಬಿಇಎಂಎಲ್ ಲೇಔಟ್‍ನ ಸಿದ್ದರಾಜು ಅವರ ನಿವಾಸಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅಧಿಕೃತವಾಗಿ ಸಿದ್ದರಾಜು ಹಾಗೂ ಬೆಂಬಲಿಗರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News