ಕಸ ಸುರಿಯುವ ಪ್ರದೇಶವನ್ನು ಉದ್ಯಾನವಾಗಿ ಪರಿವರ್ತಿಸಿದ ಇಂಡಿಯನ್ ಆಯಿಲ್

Update: 2020-10-29 15:18 GMT

ಬೆಂಗಳೂರು, ಅ.29: ಬೆಂಗಳೂರಿನ ಸುಬ್ಬಯ್ಯ ವೃತ್ತದಿಂದ ಲಾಲ್ ಬಾಗ್ ಮತ್ತು ಡಬಲ್ ರೋಡ್ ಜಂಕ್ಷನ್ ಸಂಪರ್ಕಿಸುವ ಮಿಷನ್ ರಸ್ತೆಯ ಮೇಲ್ಸೆತುವೆ ಕೆಳಗೆ ಕಸದ ರಾಶಿ ಬಿದ್ದಿರುತ್ತಿದ್ದ ಸ್ಥಳವೀಗ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಕಲ್ಪದಿಂದ, ಕಸದಿಂದ ಮುಕ್ತವಾಗಿ ಸುಂದರವಾದ ಉದ್ಯಾನವಾಗಿ ಪರಿವರ್ತನೆಗೊಂಡಿದೆ.

ಸುಬ್ಬಯ್ಯ ವೃತ್ತದಿಂದ ಮೇಲ್ಸೇತುವೆ ಪ್ರವೇಶದವರೆಗೆ ಕೇವಲ ಕಸ ತೆರವು ಮಾಡಿ ಸ್ವಚ್ಛಗೊಳಿಸುವುದಷ್ಟೇ ಅಲ್ಲದೆ, ಹಳೆಯ ರೈಲಿಂಗ್‍ಗಳನ್ನು ಬದಲಾಯಿಸಿ, ರಸ್ತೆ ವಿಭಜಕಗಳಿಗೆ ಗ್ರಾನೇಟ್ ಬುನಾದಿ ಹಾಕುವ ಕಾಮಗಾರಿಯನ್ನೂ ಕೈಗೆತ್ತಿಕೊಂಡಿತು. ಇದೀಗ ಇಡೀ ಪ್ರದೇಶವನ್ನು ಹಸಿರುಮಯ ಮಾಡಿ ಅಭಿವೃದ್ಧಿಪಡಿಸಲಾಗಿದೆ ಎಂದು ಇಂಡಿಯನ್ ಆಯಿಲ್‍ನ ರಾಜ್ಯದ ಮುಖ್ಯಸ್ಥ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಡಿ.ಎಲ್. ಪ್ರಮೋದ್ ತಿಳಿಸಿದ್ದಾರೆ.

ರಸ್ತೆ ತಡೆಗಳನ್ನು ನಿರ್ಮಿಸುವ ಮೂಲಕ ಪಾದಚಾರಿಗಳು ಸುರಕ್ಷಿತವಾಗಿ ಎರಡೂ ಬದಿಯಿಂದ ರಸ್ತೆ ದಾಟಲು ಪ್ರವೇಶ ಕಲ್ಪಿಸಲಾಗಿದೆ. ಜೊತೆಗೆ ಎರಡೂ ಕಡೆಗಳಲ್ಲಿ ವೇಗ ನಿಯಂತ್ರಕ ಉಬ್ಬುಗಳನ್ನೂ ಅಳವಡಿಸಲಾಗಿದೆ. ಇಂಡಿಯನ್ ಆಯಿಲ್ ಬೆಂಗಳೂರು ನಗರವನ್ನು ಹಸಿರು ಮತ್ತು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಬಿಬಿಎಂಪಿ ಮತ್ತು ಸ್ಥಳೀಯ ಪೊಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿನಮ್ರವಾದ ಕೊಡುಗೆಯನ್ನು ಸಮಾಜಕ್ಕೆ ನೀಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News