ಕಾಂಗ್ರೆಸ್‍ನವರು ರಾಜ್ಯದ ಒಕ್ಕಲಿಗರ ಉದ್ಧಾರ ಮಾಡುತ್ತಾರಾ?: ಡಾ.ಕೆ.ಸುಧಾಕರ್

Update: 2020-10-29 15:26 GMT

ಬೆಂಗಳೂರು, ಅ.29: ಸ್ವತಃ ಒಕ್ಕಲಿಗರಾದ ನಮ್ಮನ್ನೆ ಸರಿಯಾಗಿ ನೋಡಿಕೊಳ್ಳದ ಕಾಂಗ್ರೆಸ್ ಪಕ್ಷ ರಾಜ್ಯದ ಒಕ್ಕಲಿಗರನ್ನು ಉದ್ಧಾರ ಮಾಡಲು ಸಾಧ್ಯವೇ? ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದರು.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಲಗ್ಗೆರೆ ಹಾಗೂ ಕೊಟ್ಟಿಗೆಪಾಳ್ಯ ವಾರ್ಡ್‍ಗಳಲ್ಲಿ ಗುರುವಾರ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ ಒಂದು ವಾರದಿಂದ ಕಾಂಗ್ರೆಸ್‍ನ ಹಲವು ನಾಯಕರು ಧಮ್ ಇರಬೇಕು, ಕರುಣಾ ರಸ ಎಂಬಿತ್ಯಾದಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದ್ದೇನೆ. ಒಬ್ಬ ರಾಜಕಾರಣಿ, ಆಡಳಿತಗಾರನಿಗೆ ದಯೆ, ದೂರದೃಷ್ಟಿ, ದಕ್ಷತೆ ಇರಬೇಕೇ ಹೊರತು ಧಮ್ ಅಲ್ಲ. ಈ ಮೂರು ಗುಣ ಮುನಿರತ್ನ ಅವರಲ್ಲಿದೆ ಎಂದು ಸುಧಾಕರ್ ಹೇಳಿದರು.

ಅವರು ಕರುಣಾಮಯಿ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಕೋವಿಡ್‍ನಂಥ ಸಂಕಷ್ಟದಲ್ಲಿ ಸರಕಾರದಷ್ಟೇ ದಕ್ಷತೆಯಿಂದ ಸ್ವತಃ ಮನೆ ಮನೆಗೂ ತೆರಳಿ ಮನೆ ಮಗನಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡಿ, ಜನರ ಕಷ್ಟ ಆಲಿಸಿದ್ದಾರೆ. ಕೆಲವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಭಾಷಣ ಮಾಡುತ್ತಾರೆ. ಚುನಾವಣೆ ಬಳಿಕ ಇವರು ಯಾರೂ ನಿಮ್ಮ ಕಷ್ಟಕ್ಕಾಗುವುದಿಲ್ಲ. ಮುನಿರತ್ನ ಮಾತ್ರ ನಿಮ್ಮ ಜೊತೆ ಇರುತ್ತಾರೆ ಎಂದು ಸುಧಾಕರ್ ತಿಳಿಸಿದರು.

ಮುನಿರತ್ನ ಎಷ್ಟು ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂಬುದಷ್ಟೇ ನಿಗೂಢವಾಗಿದೆ ಹೊರತು ಅವರ ಸೋಲು ಗೆಲುವಲ್ಲ. ಈ ಉಪ ಚುನಾವಣೆಯಲ್ಲಿ ಮೊದಲ ಸ್ಥಾನ ಈಗಾಗಲೇ ಘೋಷಣೆಯಾಗಿದೆ. ಕೇವಲ ಎರಡೂ ಮತ್ತು ಮೂರನೇ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.

ನಾನು ಮತ್ತು ಗೋಪಾಲಯ್ಯ ಒಕ್ಕಗಲಿಗರೆ ಅಲ್ಲವೆ, ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರೆ ನಾವೇಕೆ ಇಲ್ಲಿಗೆ ಬರುತ್ತಿದ್ದೆವು? ಪಕ್ಷದಲ್ಲಿದ್ದ ನಮ್ಮನ್ನೇ ಸರಿಯಾಗಿ ನೋಡಿಕೊಳ್ಳದ ಇವರು, ಇಡೀ ಕ್ಷೇತ್ರದ, ರಾಜ್ಯದ ಒಕ್ಕಲಿಗರ ಉದ್ಧಾರ ಮಾಡಲು ಸಾಧ್ಯವಾ? ಇವರು ಸ್ವಾರ್ಥಕ್ಕಾಗಿ ಜಾತಿ ಮಾತನಾಡುತ್ತಿದ್ದಾರೆ ಎಂದು ಅವರು ತಿರುಗೇಟು ನೀಡಿದರು.

ವೈಯಕ್ತಿಕ ಆಸೆ-ಆಕಾಂಕ್ಷೆಗಾಗಿ ನಾವು ಕಾಂಗ್ರೆಸ್ ಪಕ್ಷ ಬಿಡಲಿಲ್ಲ. ಮುನಿರತ್ನ ಅವರಿಗೆ ಹಣದ ಅವಶ್ಯಕತೆ ಇದೆಯಾ? ಕಾರ್ಪೋರೇಟರ್, ಶಾಸಕರಾಗಿ ರಾಜರಾಜೇಶ್ವರಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಕಾಂಗ್ರೆಸ್‍ನವರೇ ಎರಡು ಬಾರಿ ಮುನಿರತ್ನ ಅವರಿಗೆ ಟಿಕೆಟ್ ನೀಡಿದ್ದಾರೆ, ಆಗ ಮುನಿರತ್ನ ಅವರ ಜಾತಿ, ಕೆಟ್ಟತನ ಕಾಣಲಿಲ್ಲ, ಬಿಜೆಪಿ ಸೇರಿದ ಕೂಡಲೇ ದೈವರಾಗಿದ್ದ ಇವರು ದೆವ್ವವಾಗಿ ಕಾಣುತ್ತಿದ್ದಾರೆ. ಕಾಂಗ್ರೆಸ್ ಅವರ ಬೇಜವಾಬ್ದಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದರು.

ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಿಜವಾದ ಕುರುಕ್ಷೇತ್ರ ನಡೆಯುತ್ತಿದೆ. ಸತ್ಯ-ಅಸತ್ಯದ ನಡುವೆ ಸಂಗ್ರಾಮ ಏರ್ಪಟ್ಟಿದೆ. ಇಲ್ಲಿನ ಜನರು ಸತ್ಯವನ್ನು ಗೆಲ್ಲಿಸಬೇಕು. ಮುನಿರತ್ನ ಅವರು ಸ್ವಾಭಿಮಾನಕ್ಕೆ ಕಟ್ಟುಬಿದ್ದವರು. ಶಾಸಕರಿಗೆ ಸಿಗಬೇಕಾದ ಮಾನ್ಯತೆ ಸಿಗದೇ ಇದ್ದಾಗ, ಅಧಿಕಾರವನ್ನೂ ಲೆಕ್ಕಿಸದೇ ರಾಜೀನಾಮೆ ನೀಡಿದವರು. ಇವರ ಗೆಲುವು ಜನಗಳ ಗೆಲುವು ಎಂದು ಸುಧಾಕರ್ ತಿಳಿಸಿದರು.

ಹೆಣ್ಣು ಮಕ್ಕಳ ಮೇಲೆ ನನಗೆ ಅಪಾರ ಗೌರವವಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕೆಪಿಸಿಸಿ ಅಧ್ಯಕ್ಷರು ಹರಕೆ ಕುರಿಯನ್ನಾಗಿ ಕರೆ ತಂದಿದ್ದಾರೆ.  ರಾಜರಾಜೇಶ್ವರಿ ಕ್ಷೇತ್ರವನ್ನು ಇನ್ನುಷ್ಟು ಅಭಿವೃದ್ಧಿ ಮಾಡುವ ಇಂಗಿತ ಮುನಿರತ್ನ ಅವರದ್ದು ಎಂದು ಸುಧಾಕರ್ ಹೇಳಿದರು.

ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಬೆಂಗಳೂರು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಗೆ ತೆರೆದುಕೊಂಡಿತ್ತು. ಇಂಥ ಕಷ್ಟದ ಸಮಯದಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನ ಅಭಿವೃದ್ಧಿಗೆ 8 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದಾರೆ. ಈ ಚುನಾವಣೆ ಪಕ್ಷದ ಉಳಿವು ಅಳಿವಿನದ್ದಲ್ಲ. ಆದರೆ, ನಮ್ಮ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಬೇಕು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. 9 ಲಕ್ಷ ಸೋಂಕಿತರದಲ್ಲಿ 8.5 ಲಕ್ಷ ಜನ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಶೇ.1.25 ರಷ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಟಾರ್ಗೆಟ್ ತಲುಪಲಿದ್ದೇವೆ. ಕಳೆದ 8 ತಿಂಗಳಿಂದ ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹೂಡಿಕೆ ಹರಿದು ಬರುತ್ತಿದೆ. ನಮ್ಮ ಸರಕಾರ ಸದೃಢವಾಗಿದೆ ಎಂಬುದನ್ನು ಈ ಬೆಳವಣಿಗೆ ತೋರುತ್ತದೆ. ಹೂಡಿಕೆಯಿಂದ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸುಧಾಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News