ಕನ್ನಡ ಭಾಷೆಯ ಸಶಕ್ತತೆಗಾಗಿ ಇಂದಿನಿಂದ ‘ಕನ್ನಡ ಕಾಯಕ ವರ್ಷ’ ಆಚರಣೆ: ಯಡಿಯೂರಪ್ಪ

Update: 2020-11-01 06:42 GMT

ಬೆಂಗಳೂರು, ನ.1: ಕನ್ನಡ ಭಾಷೆಯನ್ನು ಇನ್ನಷ್ಟು ಸಶಕ್ತಗೊಳಿಸುವ ಉದ್ದೇಶದಿಂದ ರವಿವಾರದಿಂದ (ನ.1ರಿಂದ) 2021ರ ಅಕ್ಟೋಬರ್ 31ರವರೆಗಿನ ಅವಧಿಯನ್ನು ‘ಕನ್ನಡ ಕಾಯಕ ವರ್ಷ’ವನ್ನಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಘೋಷಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಇವರ ವತಿಯಿಂದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿ ಅವರು ಬಳಿಕ ಮಾತನಾಡುತ್ತಿದ್ದರು. ‘ಕಾಯಕ ವರ್ಷ’ದ ಅವಧಿಯಲ್ಲಿ ಕನ್ನಡದ ಬಳಕೆ ಮತ್ತು ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಈ ಕಾರ್ಯಕ್ರಮಗಳ ವಿವರಗಳನ್ನು ಅಂತಿಮಗೊಳಿಸಿ, ಶೀಘ್ರದಲ್ಲೇ ಯೋಜನೆಯ ಸ್ವರೂಪವನ್ನು ಪ್ರಕಟಿಸಿ, ಅನುಷ್ಠಾನಕ್ಕೆ ತರಲಾಗುವುದು ಎಂದರು.

ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಆರಂಭಿಕ ಶಿಕ್ಷಣ ನೀಡುವುದಕ್ಕೆ ಕೇಂದ್ರ ಸರ್ಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಇದರಿಂದ ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಮತ್ತಷ್ಟು ಬಲ ದೊರಕುವ ವಿಶ್ವಾಸವಿದೆ ಎಂದರು.

ಶಿವಾಜಿ ನಗರ ಶಾಸಕ ರಿಝ್ವಾನ್ ಅರ್ಷದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. 100 ಮಂದಿಗೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News