ರಾಜ್ಯಸಭೆಯಲ್ಲಿ ಬಿಜೆಪಿ ಗರಿಷ್ಠ; ಕಾಂಗ್ರೆಸ್ ಕನಿಷ್ಠ ಮಟ್ಟಕ್ಕೆ

Update: 2020-11-03 04:00 GMT

ಹೊಸದಿಲ್ಲಿ, ನ.3: ರಾಜ್ಯಸಭೆಯ ಹನ್ನೊಂದು ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಒಂಭತ್ತು ಮಂದಿ ಆಯ್ಕೆಯಾಗುವುದರೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯಬಲ 92ಕ್ಕೇರಿದೆ. ಇದು ರಾಜ್ಯಸಭೆಯಲ್ಲಿ ಬಿಜೆಪಿಯ ಇದುವರೆಗಿನ ಗರಿಷ್ಠ ಸಂಖ್ಯಾಬಲವಾಗಿದೆ. ಮೊದಲ ಅವಧಿಯಲ್ಲಿ ಪ್ರಮುಖ ಮಸೂದೆಗಳಿಗೆ ಮೇಲ್ಮನೆಯಲ್ಲಿ ಆಂಗೀಕಾರ ಪಡೆಯಲು ಬಿಜೆಪಿಗೆ ಇದ್ದ ತೊಡಕು ಇದೀಗ ನಿವಾರಣೆಯಾದಂತಾಗಿದೆ.

ಒಟ್ಟು 245 ಸದಸ್ಯಬಲದ ರಾಜ್ಯಸಭೆಯಲ್ಲಿ ಬಿಜೆಪಿ 92, ಬಿಜೆಪಿ ಮಿತ್ರ ಪಕ್ಷಗಳು 18, ಕಾಂಗ್ರೆಸ್ 38, ಎಐಟಿಸಿ 13, ಎಡಿಎಂಕೆ 9, ಬಿಜೆಡಿ 9 ಸದಸ್ಯರನ್ನು ಹೊಂದಿದ್ದರೆ ಇತರ ಪಕ್ಷಗಳ 63 ಸದಸ್ಯರು ಮೇಲ್ಮನೆಯಲ್ಲಿದ್ದಾರೆ.

ಕಾಂಗ್ರೆಸ್ ಸದಸ್ಯಬಲ 38ಕ್ಕೆ ಇಳಿದಿದ್ದು, ಉಭಯ ಸದನಗಳಲ್ಲಿ ಕಾಂಗ್ರೆಸ್ ಬಲ 89ಕ್ಕೆ ಕುಸಿದಿದೆ. ರಾಜ್ಯಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಸದಸ್ಯಬಲದ ಅಂತರ ಕೂಡಾ ಇದುವರೆಗಿನ ಗರಿಷ್ಠ ಮಟ್ಟವನ್ನು ತಲುಪಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರ್ಯಾಣ, ದಿಲ್ಲಿ, ರಾಜಸ್ಥಾನ, ಗುಜರಾತ್, ಆಂಧ್ರ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್, ಮಿಝೋರಾಂ ಹಾಗೂ ಮಣುಪುರದಿಂದ ಯಾವುದೇ ಪ್ರಾತಿನಿಧ್ಯ ಹೊಂದಿಲ್ಲ.

ಸೋಮವಾರ ನಡೆದ ಚುನಾವಣೆಯಲ್ಲಿ ಗೃಹನಿರ್ಮಾಣ ಖಾತೆ ಸಚಿವ ಹರದೀಪ್ ಸಿಂಗ್ ಪುರಿ, ಬಿಜೆಪಿ ಪ್ರಧಾನ ಕಾರ್ಯರ್ಶಿ ಅರುಣ್ ಸಿಂಗ್ ಹಾಗೂ ದಿವಂಗತ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಉತ್ತರ ಪ್ರದೇಶದಿಂದ ಆಯ್ಕೆಯಾಗಿದ್ದಾರೆ. ಸಮಾಜವಾದಿ ಪಕ್ಷದ ರಾಮ್‌ಗೋಪಾಲ್ ಯಾದವ್ ಮತ್ತು ಬಿಎಸ್ಪಿಯ ರಾಮ್‌ಜಿ ಗೌತಮ್ ಕೂಡಾ ಆರಿಸಿ ಬಂದಿದ್ದಾರೆ. ಉತ್ತರಾಖಂಡದಿಂದ ಬಿಜೆಪಿ ನರೇಶ್ ಬನ್ಸಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೇಲ್ಮನೆಯಲ್ಲಿ ಎನ್‌ಡಿಎ ಸದಸ್ಯಬಲ 110ಕ್ಕೇರಿದ್ದು, ಉಳಿದಂತೆ ಎಐಎಡಿಎಂಕೆ (9), ಟಿಆರ್‌ಎಸ್ (7), ವೈಎಸ್‌ಆರ್‌ಸಿಪಿ (6) ಮತ್ತು ಬಿಜೆಡಿ (9) ಹಲವು ಬಾರಿ ಪ್ರಮುಖ ಮಸೂದೆಗಳ ವಿಚಾರದಲ್ಲಿ ಸರಕಾರವನ್ನು ಬೆಂಬಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News